ದೆಹಲಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ;$30,000 ಹಣಕ್ಕೆ ಬೇಡಿಕೆ

ನವದೆಹಲಿ : ಇಮೇಲ್‌ ಮೂಲಕ ದೆಹಲಿಯ ಸುಮಾರು 40 ಶಾಲೆಗಳಿಗೆ ಸೋಮವಾರ (ಡಿ. 9)ರ ಬೆಳಗ್ಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ʼʼಪಶ್ಚಿಮ ವಿಹಾರದ ಜಿಕೆ ಗೋಯೆಂಕಾ ಮತ್ತು ಡಿಪಿಎಸ್‌ ಆರ್‌ಕೆ ಪುರಂ ಶಾಲೆ ಸೇರಿದಂತೆ 40 ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿವೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ʼʼವಿವಿಧ ಶಾಲೆಗಳ ಕಟ್ಟಡದ ಒಳಗೆ ಬಾಂಬ್‌ಗಳನ್ನು ಇರಿಸಲಾಗಿದೆ. ಅವುಗಳನ್ನು ಕಣ್ಣಿಗೆ ಕಾಣಿಸದಂತೆ ಹುದುಗಿಸಿ ಇಡಲಾಗಿದೆʼʼ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಬಾಂಬ್‌ ಗಳನ್ನು ನಿಷ್ಕ್ರೀಯಗೊಳಿಸಲು 30 ಸಾವಿರ ಡಾಲರ್‌ಗೆ ಬೇಡಿಕೆ ಇಡಲಾಗಿದೆ.

“ಈ ಬಾಂಬ್‌ಗಳು ಕಟ್ಟಡಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ. ಆದರೆ ಬಾಂಬ್‌ ಸ್ಫೋಟಗೊಂಡಾಗ ಅಲ್ಲಿದ್ದವರಿಗೆ ಹಾನಿಯಾಗುತ್ತದೆ. ಅವರು ಕೈಕಾಲುಗಳನ್ನು ಕಳೆದುಕೊಳ್ಳುತ್ತಾರೆ” ಎಂದು ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ದೆಹಲಿ ಪೊಲೀಸರು ಇಮೇಲ್‌ನ ಐಪಿ ವಿಳಾಸ ಪರಿಶೀಲಿಸುತ್ತಿದ್ದಾರೆ. ಬಾಂಬ್‌ ಬೆದರಿಕೆ ಬಗ್ಗೆ ಬೆಳಗ್ಗೆ 6:15ಕ್ಕೆ ಜಿಡಿ ಗೋಯೆಂಕಾ ಶಾಲೆಯಿಂದ ನಂತರ 7:06ಕ್ಕೆ ಡಿಪಿಎಸ್ ಆರ್‌ಕೆ ಪುರಂನಿಂದ ದಿಲ್ಲಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ತಕ್ಷಣ ಶ್ವಾನದಳ, ಬಾಂಬ್ ಪತ್ತೆ ತಂಡ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಅಗ್ನಿಶಾಮಕ ಅಧಿಕಾರಿಗಳು ಶಾಲೆಗಳಿಗೆ ತಲುಪಿ ಶೋಧ ಕಾರ್ಯಾಚರಣೆ ನಡೆಸಿದರು. ಇಲ್ಲಿಯವರೆಗೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅತಿಶಿ ಅವರು, ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ. “ದೆಹಲಿಯಲ್ಲಿ ಪ್ರತಿದಿನ ಸುಲಿಗೆ, ಕೊಲೆ ಮತ್ತು ಗುಂಡಿನ ದಾಳಿಯ ನಂತರ ಇದೀಗ ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬರುತ್ತಿವೆ. ಜನರಿಗೆ ಭದ್ರತೆ ಒದಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ” ಎಂದು ಅತಿಶಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಅಕ್ಟೋಬರ್‌ ಮೊದಲ ವಾರದಲ್ಲಿ ದೆಹಲಿಯ ರೋಹಿನಿ ಪ್ರಸಾಂತ್‌ ವಿಹಾರ್‌ನ ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ ಶಾಲೆಯ ಹೊರಗಡೆ ಬಾಂಬ್‌ ಸ್ಫೋಟ ಸಂಭವಿಸಿತ್ತು. ಈ ಘಟನೆಯಿಂದ ಶಾಲೆಯ ಗೋಡೆ, ಹತ್ತಿರ ಅಂಗಡಿ ಮತ್ತು ವಾಹನಗಳಿಗೆ ಹಾನಿಯಾಗಿತ್ತು. ರಜೆ ಇದ್ದುದರಿಂದ ಶಾಲೆಯಲ್ಲಿ ಮಕ್ಕಳು ಇರದೇ ಇದ್ದುದರಿಂದ ಹೆಚ್ಚಿನ ಅನಾಹುತ ತಪ್ಪಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement