ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಇತ್ತೀಚಿನ ಚಿತ್ರ ‘ಪುಷ್ಪಾ 2: ದಿ ರೈಸ್’ ನ ಪ್ರಥಮ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಸಾವಿಗೀಡಾದ ಮಹಿಳೆಯ ಕುಟುಂಬ ಸಲ್ಲಿಸಿದ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಆದರೆ ಅಲ್ಲು ಅರ್ಜುನ್ ಅವರ ಸಾರ್ವಜನಿಕ ಸಂಪರ್ಕ ತಂಡವು ಹಂಚಿಕೊಂಡ ಮಾಹಿತಿಯ ಪ್ರಕಾರ ಕುಟುಂಬವು ಪ್ರಕರಣವನ್ನು ಕೈಬಿಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
“ನಾನು ಪ್ರಕರಣ ಹಿಂಪಡೆಯಲು ಸಿದ್ಧನಿದ್ದೇನೆ, ಬಂಧನದ ಬಗ್ಗೆ ನನಗೆ ತಿಳಿದಿರಲಿಲ್ಲ ಮತ್ತು ನನ್ನ ಪತ್ನಿ ಸಾವಿಗೀಡಾದ ಕಾಲ್ತುಳಿತಕ್ಕೂ ಅಲ್ಲು ಅರ್ಜುನ್‌ಗೂ ಯಾವುದೇ ಸಂಬಂಧವಿಲ್ಲ” ಎಂದು ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ರೇವತಿ ಪತಿ ಭಾಸ್ಕರ ಅವರು ಸುದ್ದಿಗಾರರಿಗೆ ತಿಳಿಸಿದರು.
ನಟ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ ಬೆಳಿಗ್ಗೆ ಅವರ ಮನೆಯಿಂದ ಬಿಗಿ ಭದ್ರತೆಯ ನಡುವೆ ಬಂಧಿಸಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ನಂತರ ಶುಕ್ರವಾರ ಮಧ್ಯಾಹ್ನದ ನಂತರ ಅವರಿಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಡಿಸೆಂಬರ್ 4 ರ ರಾತ್ರಿ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ಗೆ ನಟನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾಗ ಸಂಭವಿಸಿದ ಕಾಲ್ತುಳಿತದ ನಂತರ 35 ವರ್ಷದ ರೇವತಿ ಮತ್ತು ಅವರ ಎಂಟು ವರ್ಷದ ಮಗ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚಿಕಿತ್ಸೆ ಫಲಿಸದೆ ರೇವತಿ ಅವರು ಸಾವಿಗೀಡಾಗಿದ್ದರು.
ರೇವತಿ ಕುಟುಂಬದವರ ದೂರಿನ ಆಧಾರದ ಮೇಲೆ ಅಲ್ಲು ಅರ್ಜುನ್ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಹೊಸ ಕ್ರಿಮಿನಲ್ ಕಾನೂನು, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡಿಸೆಂಬರ್ 11 ರಂದು ಅಲ್ಲು ಅರ್ಜುನ್ ತನ್ನ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ರದ್ದುಗೊಳಿಸುವಂತೆ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ