ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಬಿಜೆಪಿಯ 19, ಶಿವಸೇನೆಯ 11, ಎನ್‌ಸಿಪಿಯ 9 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಮುಂಬೈ : ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಭಾನುವಾರ ನಡೆದಿದ್ದು, ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್) 39 ಸಚಿವರು ಭಾನುವಾರ ನಾಗ್ಪುರದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ಸಂಪುಟದಲ್ಲಿ ಬಿಜೆಪಿಯ 19, ಶಿಂಧೆ ಸೇನೆಯ 11 ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯ 9 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಜನಾದೇಶದ ನಂತರ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳ ನಂತರ ಸಂಪುಟ ವಿಸ್ತರಣೆ ನಡೆಯಿತು, ಏಕನಾಥ ಶಿಂಧೆ ಮತ್ತು ಅಜಿತ ಪವಾರ್ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ, ರಾಧಾಕೃಷ್ಣ ವಿಖೆ-ಪಾಟೀಲ, ಚಂದ್ರಕಾಂತ ಪಾಟೀಲ, ಆಶಿಶ್ ಶೇಲಾರ್, ಪಂಕಜಾ ಮುಂಡೆ, ಗಣೇಶ ನಾಯ್ಕ್, ಜಯಕುಮಾರ ರಾವಲ್, ಶಿವೇಂದ್ರರಾಜೇ ಭೋಸಲೆ, ಅತುಲ್ ಸೇವ್, ಅಶೋಕ ರಾಮಾಜಿ ಉಯಿಕೆ, ಸಂಜಯ ಸಾವ್ಕರೆ, ನಿತೀಶ ರಾಣೆ, ಗಿರೀಶ ಮಹಾಜನ್, ಮಧುರೀಷ ಮಹಾಜನ್, ಬೋರ್ಡಿಕರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟರ್‌ ಯುಜ್ವೇಂದ್ರ ಚಾಹಲ್- ಧನಶ್ರೀ ವರ್ಮಾ ವಿಚ್ಛೇದನ ಈಗ ಅಧಿಕೃತ

ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯಿಂದ ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ ಉದಯ ಸಾಮಂತ, ಗುಲಾಬರಾವ್‌ ಪಾಟೀಲ, ದಾದಾಜಿ ಭೂಸೆ, ಸಂಜಯ ರಾಥೋಡ, ಸಂಜಯ ಶಿರಸಾಟ್‌, ಶಂಭುರಾಜ ದೇಸಾಯಿ, ಪ್ರತಾಪ ಸರನಾಯಕ್, ಪ್ರಕಾಶ ಅಬಿತ್ಕರ್, ಆಶಿಶ್ ಜೈಸ್ವಾಲ್, ಭರತ ಶೇತ್ ಗೋಗವಾಲೆ ಮತ್ತು ಯೋಗೇಶ್ ಕದಂ ಸೇರಿದ್ದಾರೆ.
ಅಜಿತ್ ಪವಾರ್ ಅವರ ಎನ್‌ಸಿಪಿಯ ಹಸನ್ ಮುಶ್ರಿಫ್, ಧನಂಜಯ ಮುಂಡೆ, ದತ್ತಾತ್ರೇ ಭರ್ನೆ, ಅದಿತಿ ತತ್ಕರೆ, ಮಾಣಿಕ್‌ ರಾವ್‌ ಕೊಕಾಟೆ, ಮಕರಂದ ಪಾಟೀಲ ಮತ್ತು ನರಹರಿ ಜಿರ್ವಾಲ್ ಇತರರು ಪ್ರಮಾಣ ವಚನ ಸ್ವೀಕರಿಸಿದರು.
ಡಿಸೆಂಬರ್ 16 ರಂದು ವಿಧಾನಸಭೆಯ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿ ವಿಸ್ತರಣೆ ನಡೆದಿದೆ. ಈ ವಾರದ ಆರಂಭದಲ್ಲಿ, ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಫಡ್ನವೀಸ್ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಉನ್ನತ ನಾಯಕತ್ವವನ್ನು ಭೇಟಿ ಮಾಡಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement