(ಬುಧವಾರ (೧೮-೧೨-೨೦೨೪ರಂದು) ಸಾಯಂಕಾಲ ೫:೩೦ ಗಂಟೆಗೆ ತುಮಕೂರಿನ ಶ್ರೀ ಸಿದ್ಧಗಂಗಾಮಠದಲ್ಲಿ ಡಾ. ಎಸ್.ಎಲ್. ಕಾಡದೇವರಮಠ ಅವರ ೭೦ನೇ ವರ್ಷದ ಅಂಗವಾಗಿ ಗ್ರಂಥ ಗಾರುಡಿಗ ಅಭಿನಂದನಾ ಗ್ರಂಥ ಲೋಕಾರ್ಪಣೆ ಗೊಳ್ಳಲಿದ್ದು, ತನ್ನಿಮಿತ್ತ ಲೇಖನ)
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಶಿವಶಂಕರ ಲಿಂಗಯ್ಯ ಕಾಡದೇವರಮಠ ತಮ್ಮ ಕಾರ್ಯಕ್ಷೇತ್ರವನ್ನಾಗಿರಿಸಿ ಕೊಂಡಿದ್ದು ತುಮಕೂರನ್ನು. ೭೦ರ ವಯಸ್ಸಿನ (ಜನನ: ನವಂಬರ್ ೯, ೧೯೫೪) ಡಾ. ಎಸ್.ಎಲ್. ಕಾಡದೇವರಮಠ ಅವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಎಸ್.ಎಲ್.ಕೆ.ಮಠ
ಎಂದೇ ಚಿರಪರಿಚಿತರು.
ಕಾಡದೇವರಮಠ ಅವರು ಸ್ನಾತಕೋತರ ಎಂ.ಎ., ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಸ್ನಾತಕೋತ್ತರ ಪದವಿ ಹಾಗೂ ಎಂ.ಫಿಲ್ ಹಾಗೂ ಪಿ.ಎಚ್.ಡಿ. ಅಧ್ಯಯನ ಮಾಡಿದ್ದಾರೆ. ಧಾರವಾಡದ ಭಾರತ ಅಭಿವೃದ್ಧಿ ಕೇಂದ್ರದಲ್ಲಿ ಗ್ರಾಮೀಣ ಗ್ರಂಥಾಲಯಗಳ ಯೋಜನಾಧಿಕಾರಿಗಳಾಗಿ ೧೯೮೪ ರಿಂದ ೧೯೮೬ರವರೆಗೆ ೨ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ೧೯೮೬ರಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾ ಪದವಿ ಮಹಿಳಾ ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಸಹಪ್ರಾಧ್ಯಾಪಕರಾಗಿ ನೇಮಕಗೊಂಡು ಜುಲೈ ೨೦೧೩ರ ವರೆಗೆ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಜೆಓಸಿ ಡಿಪ್ಲೋಮಾ ವಿಭಾಗದ ವಿಭಾಗಾಧ್ಯಕ್ಷರಾಗಿ ೧೨ ವರ್ಷ ಸೇವೆ ಸಲ್ಲಿಸಿರುವ ಅವರು ೨೦೦೪ ರಿಂದ ೨೦೦೮ರ ವರೆಗೆ ೫ ವರ್ಷಗಳ ತುಮಕೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಕ್ಷೇತ್ರದ ಎನ್‌ಸೈಕ್ಲೋಪೀಡಿಯಾ ಎಂದೇ ಹೆಸರುವಾಸಿಯಾದ ಶಿವಶಂಕರ ಕಾಡದೇವರಮಠ ಅವರು ಕ್ರಿಯಾಶೀಲ ಸಂಘಟಕರು. . ಕರ್ನಾಟಕ ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ ಬೆಂಗಳೂರು ಇದರ ಅಧ್ಯಕ್ಷರಾಗಿ ೨೦೦೬ ರಿಂದ ೨೦೧೩ರವರೆಗೆ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಂಥಪಾಲಕರ ಸಂಘದ (ಕಲಾ) ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವರು ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಶೈಕ್ಷಣಿಕ ಗ್ರಂಥಾಲಯ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೦೯ ರಿಂದ ೨೦೧೧ರ ವರೆಗೆ ಕರ್ನಾಟಕ ಸರಕಾರದ ಕರ್ನಾಟಕ ಜ್ಞಾನ ಆಯೋಗ (ಉನ್ನತ ಶಿಕ್ಷಣ)ದ ಸದಸ್ಯರಾಗಿ,೨೦೦೪ ರಿಂದ ೨೦೦೭ರ ಅವಧಿಗೆ ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ಗ್ರಂಥಪಾಲಕರ ಸಂಘದ ಗೌರವಾನ್ವಿತ ಅಧ್ಯಕ್ಷರಾಗಿ ಹಾಗೂ ನವದೆಹಲಿಯ ಭಾರತೀಯ ಗ್ರಂಥಾಲಯಗಳ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಾಡದೇವರಮಠ ಅವರಿಗೆ ಹಲವಾರು ಪ್ರಶಸ್ತಿ, ಸನ್ಮಾನ ಮತ್ತು ಪುರಸ್ಕಾರ ಲಭಿಸಿದೆ. ೨೦೦೮ರಲ್ಲಿ ಕರ್ನಾಟಕ ಸರಕಾರದಿಂದ ಕೊಡಮಾಡುವ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿ, ೨೦೦೮ರಲ್ಲಿ ತುಮಕೂರು ಜಿಲ್ಲಾಡಳಿತದಿಂದ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ೨೦೦೮-೨೦೦೯ನೇ ಸಾಲಿಗಾಗಿ ರೋಟರಿ ಸೆಂಟ್ರಲ್ ತುಮಕೂರು ಕೇಂದ್ರದವರು ಕೊಡಮಾಡುವ ವೃತ್ತಿಪರ ಉತ್ಕೃಷ್ಟತೆ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ..
ಶಿವಶಂಕರ ಕಾಡದೇವರಮಠ ೫೩ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದು, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಬಂಧ ಮಂಡಿಸಿದ್ದಾರೆ. ಅಲ್ಲದೆ, ಸಂಶೋಧನಾತ್ಮಕ ಲೇಖನಗಳನ್ನು ಮಂಡಿಸಿದ್ದಾರೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ೧೭ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದವಿಚಾರ ಸಂಕಿರಣಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಹವ್ಯಾಸಿ ಬರಹಗಾರರಾಗಿರುವ ಕಾಡದೇವರಮಠ ಅವರು ಇಂಡಿಯನ್ ಜರ್ನಲ್ ಆಫ್ ಲೈಬ್ರರಿ & ಇನ್‌ಫರ‍್ಮೇಶನ್ ಟೆಕ್ನಾಲಜಿಯ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ.
೨೦೧೪ ರಿಂದ ರೀಡ್ ಬುಕ್ ಫೌಂಡೇಶನ್‌ದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಇದರ ಅಡಿ, ಪರಿಸರ ಜಾಗೃತಿ, ಶಾಲೆಗಳಿಗೆ ಕಸ ಸಂಗ್ರಹಣೆ ತೊಟ್ಟಿಗಳನ್ನು ವಿತರಿಸುವ
ಮೂಲಕ ಸ್ವಚ್ಛ ಕರ್ನಾಟಕ, ಹಸಿರು ಕರ್ನಾಟಕ ಅಭಿಯಾನ, ಸಾಹಿತ್ಯ ಪುಸ್ತಕ ವಿತರಣೆ, ಕೌಶಲ್ಯಾಭಿವೃದ್ಧಿ ತರಬೇತಿ, ಆತ್ಮರಕ್ಷಣೆ, ಆರೋಗ್ಯ ಹಾಗೂ ಶುಚಿತ್ವದ ಕುರಿತಾಗಿ ಹದಿಹರೆಯದ ಬಾಲಕಿಯರಿಗೆ ಸ್ವಸಹಾಯ ಮಾರ್ಗದರ್ಶಿಕೆ ವಿತರಣೆ, ಪ್ಲಾಸ್ಟಿಕ್ ಬಳಕೆ ನಿಷೇಧದ ವಿರುದ್ಧ ಅಭಿಯಾನ, ಆಹಾರ ಮತ್ತು ಜಲ ಸಂರಕ್ಷಣೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.
ವೈದ್ಯಕೀಯ ತಜ್ಞ ಡಾ. ಕೆ. ರಾಜಶೇಖರ ಅವರ ಮಧುಮೇಹ ದರ್ಶನ ಗ್ರಂಥವನ್ನು ರೀಡ್ ಬುಕ್ ಫೌಂಡೇಶನ್ ನಿಂದ ಪ್ರಕಟಿಸಿಆರೋಗ್ಯ ಶಿಬಿರಗಳಲ್ಲಿ ಹಂಚುತ್ತಿದ್ದಾರೆ. ಡಾ. ರೂಪಾ ಅವರ ತಿಳಿ, ಕಲಿ, ಬೆಳಿ ಗ್ರಂಥವನ್ನು ವಿದ್ಯಾರ್ಥಿನಿಯರಿಗೆ ವಿತರಿಸುತ್ತಿದ್ದಾರೆ. ನನ್ನ ಏಳ್ಗೆಗೆ ನಾನೇ ಶಿಲ್ಪಿ ಎಂಬ ಕಾರ್ಯಕ್ರಮದಲ್ಲಿ ಸ್ವಾಮಿ ಪುರುಷೋತ್ತಾನಂದ ಅವರ ಯಶಸ್ಸಿನ ರಹಸ್ಯ ಎಂಬ ಪುಸ್ತಕವನ್ನು ರಾಜ್ಯದ ೪೫೦ಕ್ಕೂ ಹೆಚ್ಚಿನ ಶಾಲಾ ಕಾಲೇಜುಗಳಿಗೆ ಉಚಿತವಾಗಿ ವಿತರಿಸಿದ್ದಾರೆ.
ತಂದೆ ಲಿಂಗಯ್ಯ, ತಾಯಿ ಶಿವುಬಾಯಿ, ಕುಟುಂಬದವರು, ಪತ್ನಿ ಸುರೇಖಾ, ಮಕ್ಕಳಾದ ಸಾಗರ, ಸಾವನ್, ಸೊಸೆಯಂದಿರು, ಬಂಧು-ಬಳಗದವರು, ಕೇಂದ್ರ ಸಚಿವರಾಗಿದ್ದ
ಅನಂತಕುಮಾರ ಅವರ ನಿರಂತರ ಪ್ರೋತ್ಸಾಹ ಮತ್ತು ಸಹಕಾರದಿಂದ ಎಲ್ಲ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಸೌಜನ್ಯದಿಂದ ನುಡಿಯುವ ಕಾಡದೇವರಮಠ ಅವರು ಧಾರವಾಡದ ಮುರುಗಾಮಠ, ತುಮಕೂರಿನ ಸಿದ್ಧಗಂಗಾಮಠ ಮತ್ತು ರೋಟರಿ ಕ್ಲಬಿನಿಂದಾಗಿ ತಮ್ಮ ಜೀವನದಲ್ಲಿ ಪರಿವರ್ತನೆಯಾಗಿದೆ ಎಂದು ಹೇಳುತ್ತಾರೆ.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು
ನಿಮ್ಮ ಕಾಮೆಂಟ್ ಬರೆಯಿರಿ