ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು ಸದನದಲ್ಲಿ ನನಗೆ ಕೊಲೆಗಡುಕ ಎಂದು ನಿಂದನೆ ಮಾಡಿ ತಮ್ಮ ಬೆಂಬಲಿಗರನ್ನು ಸುವರ್ಣ ಸೌಧಕ್ಕೆ ನುಗ್ಗಿಸಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಪ್ರತಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಸಿ.ಟಿ.ರವಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ರಾತ್ರಿ ಹತ್ತರ ನಂತರ ವಕೀಲರನ್ನು ಕರೆಸಿದ ಸಿ.ಟಿ. ರವಿ ಅವರು ದೂರು ದಾಖಲಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸದನದಲ್ಲೇ ನನಗೆ ಕೊಲೆಗಡುಕ ಎಂದು ನಿಂದನೆ ಮಾಡಿದ್ದಾರೆ. ಹಾಗೂ ಅವರ ಬೆಂಬಲಿಗರನ್ನು ಸುವರ್ಣ ಸೌಧಕ್ಕೆ ನುಗ್ಗಿಸಿ ಅವರ ಮೂಲಕ ನನ್ನ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಸಿ.ಟಿ. ರವಿ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ವಿಪಕ್ಷ ನಾಯಕ ಆರ್. ಅಶೋಕ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠ್ಠಲ ಹಲಗೇಕರ, ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಅವರು ತಡರಾತ್ರಿ ವರೆಗೆ ಠಾಣೆಯಲ್ಲಿ ಖಾನಾಪುರ ಬೀಡು ಬಿಟ್ಟಿದ್ದಾರೆ.
ಇದಕ್ಕೂ ಮೊದಲು ಸಿ.ಟಿ.ರವಿ ಅವರು ತನ್ನ ಕುರಿತು ಅಶ್ಲೀಲ ಪದ ಬಳಕೆ ಮಾಡಿ ನನ್ನನ್ನು ನಿಂದಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಬೆಳಗಾವಿ ಸುವರ್ಣಸೌಧಕ್ಕೆ ತೆರಳಿ ಸಿ.ಟಿ.ರವಿ ಅವರನ್ನು ಬಂಧಿಸಿದ್ದರು. ಸುರಕ್ಷಿತ ದೃಷ್ಟಿಯಿಂದ ಸಿ.ಟಿ. ರವಿ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಕರೆತರಲಾಗಿದೆ.
ಆರೋಪ ನಿರಾಕರಿಸಿದ ಸಿ.ಟಿ.ರವಿ..
ತಾನು ಸಚಿವೆ ಹೆಬ್ಬಾಳಕರ್ ಕುರಿತು ಯಾವುದೇ ಅಶ್ಲೀಲ ಪದ ಬಳಕೆ ಮಾಡಿಲ್ಲ ಎಂದು ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದಾರೆ. ನಾನು ಹೇಳಿದ್ದನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ