ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರ ವಿರುದ್ಧ ಅಶ್ಲೀಲ ಪದಬಳಕೆ ಆರೋಪಿತ ಪ್ರಕರಣದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಜಾಮೀನು ಅರ್ಜಿ ವಿಚಾರರಣೆ ನಡೆಸಿದ ಬೆಳಗಾವಿ ಕೋರ್ಟ್ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ಸಿಟಿ ರವಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿ 5ನೇ ಜೆಎಂಎಫ್‌ಸಿ ಕೋರ್ಟ್‌ನ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಟಿ ರವಿಯನ್ನು ಪೊಲೀಸರು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ.
ಇಂದು, ಶುಕ್ರವಾರ ಬೆಳಗ್ಗೆ ಹಿರೇಬಾಗೇವಾಡಿ ಪೊಲೀಸರು ಸಿಟಿ ರವಿ ಅವರನ್ನು ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದರು.. ಈ ವೇಳೆ ಸಿಟಿ ರವಿ ಪರ ವಕೀಲರಾದ ಎಂಬಿ ಜಿರಲಿ ಅವರು ಜಾಮೀನು ನೀಡುವಂತೆ ಮನವಿ ಮಾಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳು ಆದೇಶ ಕಾಯ್ದಿರಿಸಿದ್ದರು. ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಬೆಳಗಾವಿ ಕೋರ್ಟ್ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ವಾರ್ಗಾಯಿಸಿ ಆದೇಶಿಸಿದೆ.
ಸಿ.ಟಿ.ರವಿ ಅವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸಿ.ಟಿ. ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಹೀಗಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ