ವಂಚನೆಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತದ ತಂಡದ (Team India)ದ ಮಾಜಿ ಕ್ರಿಕೆಟ್ ಆಟಗಾರ, ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಎಂದು ವರದಿಯಾಗಿದೆ.
ಅರೆಸ್ಟ್ ವಾರೆಂಟ್ ಜಾರಿ ಮಾಡುವಂತೆ ಪಿಎಫ್‌ಒ ಪ್ರಾದೇಶಿಕ ಆಯುಕ್ತ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪುಲಿಕೇಶಿ ನಗರ ಪೊಲೀಸರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ರಾಬಿನ್ ಉತ್ತಪ್ಪ ಒಡೆತನದ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯು ಉದ್ಯೋಗಿಗಳ ಸಂಬಳದಲ್ಲಿ ಪಿಎಫ್ ಹಣ ಕಟ್ ಮಾಡಿದ್ದರೂ, ಅವರ ಖಾತೆಗೆ ಹಾಕದೆ 23 ಲಕ್ಷ ರೂ. ವಂಚಿಸಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಷಡಾಕ್ಷರಿ ಗೋಪಾಲ ರೆಡ್ಡಿ ಅವರು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನಲೆಯಲ್ಲಿ ರಾಬಿನ್ ಉತ್ತಪ್ಪ ಅವರಿಗೆ ನೋಟಿಸ್ ನೀಡಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಆದರೆ ಪ್ರಸ್ತುತ ಆ ವಿಳಾಸದಲ್ಲಿ ಅವರು ವಾಸವಿಲ್ಲ. ಹೀಗಾಗಿ ಇದೀಗ ರಾಬಿನ್ ಉತ್ತಪ್ಪ ಅವರಿಗೆ ವಾರೆಂಟ್ ಜಾರಿಗೊಳಿಸಲಾಗಿದೆ. ಸದ್ಯ ರಾಬಿನ್ ಉತ್ತಪ್ಪ ತಮ್ಮ ಬೆಂಗಳೂರಿನ ಮನೆ ತೊರೆದು ದುಬೈಯಲ್ಲಿ ವಾಸವಾಗಿದ್ದಾರೆ.
ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು 2022ರಲ್ಲಿ ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಬಳಿಕ ಅವರು ದುಬೈಯಲ್ಲಿ ವಾಸವಾಗಿದ್ದಾರೆ. ಕೊಡಗು ಮೂಲದ ಅವರು 2006ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಆಡಿದ್ದರು. 2007ರ ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. 2015ರ ಬಳಿಕ ಟೀಂ ಇಂಡಿಯಾದಲ್ಲಿ ರಾಬಿನ್ ಉತ್ತಪ್ಪ ಸ್ಥಾನ ಪಡೆಯಲು ವಿಫಲರಾಗಿದ್ದ ಅವರು ನಂತರ, ಐಪಿಎಲ್ ಹಾಗೂ ರಣಜಿ ಕ್ರಿಕೆಟ್ ಆಡುತ್ತಿದ್ದರು. ಟೀಮ್ ಇಂಡಿಯಾ ಪರ 46 ಏಕದಿನ ಪಂದ್ಯಗಳಲ್ಲಿ 42 ಇನಿಂಗ್ಸ್ ಆಡಿದ್ದಾರೆ. 13 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2009–2010ರಲ್ಲಿ ಅವರು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ