ಮಹಿಳೆಗೆ ಬಂದ ಪಾರ್ಸೆಲ್‌ ನಲ್ಲಿ ಇತ್ತು ಅಪರಿಚಿತ ವ್ಯಕ್ತಿಯ ಶವ…! ₹ 1.3 ಕೋಟಿ ಹಣದ ಬೇಡಿಕೆಯ ಪತ್ರ…!!

ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯ ಶವವಿದ್ದ ಪಾರ್ಸೆಲ್ ಬಂದಿದ್ದು, ಅದನ್ನು ನೋಡಿ ಮಹಿಳೆ ಆಗಾತಕ್ಕೆ ಒಳಗಾಗಿದ್ದಾಳೆ…!
ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಭಯಾನಕ ಘಟನೆ ವರದಿಯಾಗಿದೆ. ನಾಗ ತುಳಸಿ ಎಂಬ ಮಹಿಳೆಯೊಬ್ಬರು ಮನೆ ನಿರ್ಮಿಸಲು ಆರ್ಥಿಕ ಸಹಾಯಕ್ಕಾಗಿ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಸಮಿತಿಯವರು ಮಹಿಳೆಗೆ ಟೈಲ್ಸ್ ಕಳುಹಿಸಿದ್ದರು. ಮನೆ ನಿರ್ಮಾಣದಲ್ಲಿ ಹೆಚ್ಚಿನ ಸಹಾಯಕ್ಕಾಗಿ ಅವಳು ಮತ್ತೆ ಕ್ಷತ್ರಿಯ ಸೇವಾ ಸಮಿತಿಗೆ ಮನವಿ ಮಾಡಿದ್ದರು. ಸಮಿತಿಯು ವಿದ್ಯುತ್ ಉಪಕರಣಗಳನ್ನು ನೀಡುವುದಾಗಿ ಭರವಸೆ ನೀಡಿತ್ತು ಎಂದು ವರದಿಯಾಗಿದೆ.

ನಂತರ ಅರ್ಜಿದಾರರಿಗೆ ಲೈಟ್‌ಗಳು, ಫ್ಯಾನ್‌ಗಳು ಮತ್ತು ಸ್ವಿಚ್‌ಗಳಂತಹ ವಸ್ತುಗಳನ್ನು ಒದಗಿಸುವುದಾಗಿ ವಾಟ್ಸಾಪ್‌ನಲ್ಲಿ ಸಂದೇಶ ಬಂದಿತ್ತು. ವ್ಯಕ್ತಿಯೊಬ್ಬ ಗುರುವಾರ ರಾತ್ರಿ ಮಹಿಳೆಯ ಮನೆ ಬಾಗಿಲಿಗೆ ಬಾಕ್ಸ್ ತಲುಪಿಸಿ ಅದರಲ್ಲಿ ವಿದ್ಯುತ್ ಉಪಕರಣಗಳಿವೆ ಎಂದು ತಿಳಿಸಿ ಅಲ್ಲಿಂದ ತೆರಳಿದ್ದಾನೆ. ಮಹಿಳೆ ಪಾರ್ಸೆಲ್ ತೆರೆದ ನಂತರ ಅದರಲ್ಲಿ ವ್ಯಕ್ತಿಯ ಶವವನ್ನು ಕಂಡು ಆಘಾತಕ್ಕೊಳಗಾದರು.
ಆಕೆಯ ಕುಟುಂಬದವರೂ ಭಯಭೀತರಾಗಿದ್ದು, ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದ್ನಾನ್ ನಯೀಮ್ ಅಸ್ಮಿ ಕೂಡ ಗ್ರಾಮಕ್ಕೆ ಭೇಟಿ ನೀಡಿ ಪ್ರಕರಣದ ತನಿಖೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌, ಏಕದಿನ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ

ಪಾರ್ಸೆಲ್‌ನಲ್ಲಿ ₹ 1.30 ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟ ಪತ್ರವೂ ಪತ್ತೆಯಾಗಿದೆ ಮತ್ತು ಹಣ ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಪಾರ್ಸೆಲ್ ತಲುಪಿಸಿದ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ಇದು ಸುಮಾರು 45 ವರ್ಷ ವಯಸ್ಸಿನ ಪುರುಷನ ಶವವಾಗಿದೆ. 4-5 ದಿನಗಳ ಹಿಂದೆ ವ್ಯಕ್ತಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವ್ಯಕ್ತಿಯನ್ನು ಕೊಲೆ ಮಾಡಲಾಗಿದೆಯೇ ಎಂದು ತಿಳಿಯಲು ತನಿಖೆ ಮುಂದುವರೆದಿದೆ. ತನಿಖೆಯ ಭಾಗವಾಗಿ, ಸುತ್ತಮುತ್ತಲಿನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಕಾಣೆಯಾದ ದೂರುಗಳನ್ನು ಪರಿಶೀಲಿಸುತ್ತಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement