ಚೆನ್ನೈ: ತಮಿಳುನಾಡಿನ ದೇವಸ್ಥಾನದ ಹುಂಡಿಯಲ್ಲಿ ಆಕಸ್ಮಿಕವಾಗಿ ಐಫೋನ್ ಬಿದ್ದ ವ್ಯಕ್ತಿಯೊಬ್ಬ ತನ್ನ ಫೋನ್ ಅನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ.
ಯಾಕೆಂದರೆ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಅವರ ಮನವಿಯನ್ನು ನಯವಾಗಿ ತಿರಸ್ಕರಿಸಿದ್ದು, ದೇವಾಲಯದ ಹುಂಡಿಗೆ ಬಿದ್ದಿದ್ದು ಈಗ ಅದು ದೇವಾಲಯದ ಆಸ್ತಿ ಎಂದು ಹೇಳಿದೆ.
ಹುಂಡಿ ನಿಯಮಗಳ ಸ್ಥಾಪನೆ, ಸುರಕ್ಷತೆ ಮತ್ತು ಲೆಕ್ಕಪತ್ರ ನಿರ್ವಹಣೆ, 1975 ರ ಅಡಿಯಲ್ಲಿ, ಹುಂಡಿಗಳಿಗೆ ಹಾಕಿದ ಎಲ್ಲವನ್ನೂ ಯಾವುದೇ ಸಮಯದಲ್ಲಿ ಮಾಲೀಕರಿಗೆ ಹಿಂತಿರುಗಿಸಲಾಗುವುದಿಲ್ಲ, ಏಕೆಂದರೆ ಅವು ದೇವಾಲಯಕ್ಕೆ ಸೇರಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಫೋನ್ ಅನ್ನು ದೇವರಿಗೆ ಅರ್ಪಣೆ ಎಂದು ತೆಗೆದುಕೊಳ್ಳಲಾಗಿದೆ, ಐಫೋನ್ ಮಾಲೀಕರು ಅದರ ಡೇಟಾವನ್ನು ಮಾತ್ರ ಹಿಂಪಡೆಯಬಹುದು ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ,
ಚೆಂಗಲ್ಪಟ್ಟು ಜಿಲ್ಲೆಯ ತಿರುಪೋರೂರಿನ ಶ್ರೀ ಕಂದಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ದಿನೇಶ ಎಂಬವರ ಐ ಫೋನ್ ಆಕಸ್ಮಿಕವಾಗಿ ಹುಂಡಿಗೆ ಬಿದ್ದಿದೆ. ನಂತರ ದಿನೇಶ ಶ್ರೀ ಕಂದಸ್ವಾಮಿ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ, ಐಫೋನ್ ಅನ್ನು ವಾಪಸ್ ಮಾಡುವಂತೆ ಮನವಿ ಮಾಡಿದರು. ಆದರೆ ದೇವಾಲಯದ ಆಡಳಿತ ಮಂಡಳಿ ಅವರ ಮನವಿಯನ್ನು ತಿರಸ್ಕರಿಸಿದೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪಿ.ಕೆ.ಸೇಕರ ಬಾಬು ಮಾತನಾಡಿ, ‘ಕಾಣಿಕೆ ಹುಂಡಿಗೆ ಹಾಕುವ ಯಾವುದೇ ಆದರೂ ದೇವರ ಖಾತೆಗೆ ಸೇರುತ್ತದೆ. ದೇವಸ್ಥಾನಗಳಲ್ಲಿನ ಆಚರಣೆಗಳು ಮತ್ತು ಸಂಪ್ರದಾಯದ ಪ್ರಕಾರ, ಹುಂಡಿಯಲ್ಲಿ ಹಾಕಿದ ಯಾವುದೇ ವಸ್ತುವು ನೇರವಾಗಿ ಆ ದೇವಾಲಯದ ದೇವರ ಖಾತೆಗೆ ಹೋಗುತ್ತದೆ. ಆಡಳಿತವು ಭಕ್ತರಿಗೆ ಕಾಣಿಕೆಗಳನ್ನು ಹಿಂತಿರುಗಿಸಲು ಅನುಮತಿ ನೀಡುವುದಿಲ್ಲ” ಎಂದು ಬಾಬು ಸುದ್ದಿಗಾರರಿಗೆ ತಿಳಿಸಿದರು.
ಆದರೂ ಇದಕ್ಕೆ ಏನಾದರೂ ಪರಿಹಾರದ ಸಾಧ್ಯತೆ ಇದೆಯೇ ಎಂದು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಮಾಧವರಂನಲ್ಲಿರುವ ಅರುಲ್ಮಿಗು ಮಾರಿಯಮ್ಮನ ದೇವಸ್ಥಾನದ ನಿರ್ಮಾಣ, ವೇಣುಗೋಪಾಲನಗರದಲ್ಲಿರುವ ಅರುಲ್ಮಿಗು ಕೈಲಾಸನಾಥರ ದೇವಸ್ಥಾನಕ್ಕೆ ಸೇರಿದ ದೇವಸ್ಥಾನದ ತೊಟ್ಟಿಯ ನವೀಕರಣವನ್ನು ಪರಿಶೀಲಿಸಿದ ನಂತರ ಸಚಿವರು ಈ ವಿಷಯ ತಿಳಿಸಿದರು.
ಕೇರಳದ ಅಲಪ್ಪುಳದ ಎಸ್ ಸಂಗೀತಾ ಎಂಬ ಭಕ್ತೆ 2023ರ ಮೇನಲ್ಲಿ ಪಳನಿಯ ಶ್ರೀ ದಂಡಾಯುತಪಾಣಿ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಆಕಸ್ಮಿಕವಾಗಿ ತನ್ನ 1.75 ಪವನ್ ಚಿನ್ನದ ಸರವನ್ನು ಬೀಳಿಸಿಕೊಂಡಿದ್ದಳು. ಆಕೆ ನೈವೇದ್ಯ ಅರ್ಪಿಸಲು ಕೊರಳಲ್ಲಿದ್ದ ತುಳಸಿ ಮಾಲೆಯನ್ನು ತೆಗೆದಾಗ ಅದು ಹುಂಡಿಗೆ ಬಿದ್ದಿತ್ತು. .
ಆಕೆಯ ಆರ್ಥಿಕ ಹಿನ್ನಲೆಯನ್ನು ಪರಿಗಣಿಸಿ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆಕಸ್ಮಿಕವಾಗಿ ಚೈನ್ ಬಿದ್ದಿರುವುದನ್ನು ದೃಢಪಡಿಸಿದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಅದೇ ಮೌಲ್ಯದ ಹೊಸ ಚಿನ್ನದ ಸರವನ್ನು ಖರೀದಿಸಿ ಕೊಟ್ಟಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ