ಬೆಂಗಳೂರು : ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅತುಲ್ ಸುಭಾಷ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಅವರ ಪರಿತ್ಯಕ್ತ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ತಾಯಿ ಮತ್ತು ಸಹೋದರಿಗೆ ಬೆಂಗಳೂರಿನ ಮೆಯೋ ಹಾಲ್‌ನ ಸತ್ರ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.
ನಿಖಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ ಮತ್ತು ನಿಖಿತಾ ಸಹೋದರ ಅನುರಾಗ ಸಿಂಘಾನಿಯಾ ಅವರಿಗೆ ಬೆಂಗಳೂರಿನ ಮೆಯೋ ಹಾಲ್‌ನಲ್ಲಿರುವ 29ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಬಾಳಪ್ಪ ಅಪ್ಪಣ್ಣ ಜರಗು ಜಾಮೀನು ಮಂಜೂರು ಮಾಡಿದ್ದಾರೆ.
ವಿಸ್ತೃತ ವಾದ ಆಲಿಸಿ, ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಪರವಾಗಿ ವಕೀಲ ವಿ ಭರತ್ ಕುಮಾರ ವಾದಿಸಿದ್ದರು.
ಈಚೆಗೆ ಕರ್ನಾಟಕ ಹೈಕೋರ್ಟ್ ಜನವರಿ 4ರಂದೇ ನಿಖಿತಾ, ನಿಶಾ ಮತ್ತು ಅನುರಾಗ ಅವರ ಜಾಮೀನು ಅರ್ಜಿಯನ್ನು ನಿರ್ಧರಿಸಬೇಕು ಎಂದು ವಿಚಾರಣಾಧೀನ ನ್ಯಾಯಾಲಯಕ್ಕೆ ಸೂಚಿಸಿತ್ತು.
ಡಿಸೆಂಬರ್ 29ರಂದು 34 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಸುಭಾಷ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುದೀರ್ಘ ಮರಣ ಪತ್ರದಲ್ಲಿ ಹಾಗೂ ವೀಡಿಯೊ ಮಾಡಿ ಅದರಲ್ಲಿ ಪತ್ನಿ ನಿಖಿತಾ ಮತ್ತು ಆಕೆಯ ಕುಟುಂಬಸ್ಥರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಿಖಿತಾ ಅವರನ್ನು ಮಾರತಹಳ್ಳಿ ಪೊಲೀಸರು ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಿದ್ದರು. ತಾಯಿ ನಿಶಾ ಸಿಂಘಾನಿಯಾ ಮತ್ತು ಸಹೋದರ ಅನುರಾಗ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರಾಮೇಶ್ವರ ಹೋಟೆಲ್ ಬಳಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಡಿಸೆಂಬರ್ 16ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ