ಗುವಾಹತಿ: “ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ ಮತ್ತು ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ಸರ್ಕಾರ(Indian State)ದ ವಿರುದ್ಧವೇ ಹೋರಾಡುತ್ತಿದ್ದೇವೆ” ಎಂದು ಹೇಳಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಗುವಾಹತಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೊಂಜಿತ್ ಚೇಟಿಯಾ ಎಂಬವರು ಪನ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಪಕ್ಷದ ನಾಯಕನ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ನೀಡಿರುವ ಹೇಳಿಕೆ ಸಾಮಾನ್ಯ ರಾಜಕೀಯ ಟೀಕೆ ಅಲ್ಲ ಎಂದು ಅವರು ಹೇಳಿದ್ದಾರೆ.
“…ಭಾರತ ಸರ್ಕಾರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸಲು ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಂಗೆಯನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿದ್ದಾರೆ ಎಂದು ಮಾಹಿತಿದಾರರು ನಂಬುತ್ತಾರೆ” ಎಂದು ಎಫ್ಐಆರ್ ಹೇಳಿದೆ.
“ಆರೋಪಿ ನೀಡಿದ ಹೇಳಿಕೆಯು ಅನುಮತಿಸುವ ವಾಕ್ ಸ್ವಾತಂತ್ರ್ಯದ ಮಿತಿಗಳನ್ನು ಮೀರಿದೆ ಮತ್ತು ಇದು ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ. ತನ್ನ ಹೋರಾಟವು ‘ಭಾರತ ಸರ್ಕಾರದ ವಿರುದ್ಧವೇ’ ಎಂದು ಘೋಷಿಸುವ ಮೂಲಕ, ಅವರು ಪ್ರಜ್ಞಾಪೂರ್ವಕವಾಗಿ ವಿಧ್ವಂಸಕ ಚಟುವಟಿಕೆಗಳನ್ನು ಮತ್ತು ಜನರಲ್ಲಿ ದಂಗೆಯನ್ನು ಪ್ರಚೋದಿಸಿದ್ದಾರೆ. ಇದು ಸರ್ಕಾರದ ಅಧಿಕಾರವನ್ನು ಅಮಾನ್ಯಗೊಳಿಸುವ ಮತ್ತು ಅದನ್ನು ಪ್ರತಿಕೂಲ ಶಕ್ತಿ ಎಂದು ಬಿಂಬಿಸುವ ಪ್ರಯತ್ನವಾಗಿದೆ, ಆ ಮೂಲಕ ಅಶಾಂತಿ ಮತ್ತು ಪ್ರತ್ಯೇಕತಾವಾದಿ ಭಾವನೆಗಳನ್ನು ಕೆರಳಿಸುವ ಅಪಾಯಕಾರಿ ನಿರೂಪಣೆಯನ್ನು ಇದು ಸೃಷ್ಟಿಸುತ್ತದೆ, ”ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
“ಪ್ರತಿಪಕ್ಷದ ನಾಯಕನಾಗಿ ಅವರ ಸ್ಥಾನವನ್ನು ಗಮನಿಸಿದರೆ ಈ ನಡವಳಿಕೆಯು ವಿಶೇಷವಾಗಿ ಆತಂಕಕಾರಿಯಾಗಿದೆ, ಇದು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯೊಂದಿಗೆ ಬರುತ್ತದೆ. ಬದಲಾಗಿ, ಆರೋಪಿಯು ತನ್ನ ವೇದಿಕೆಯನ್ನು ಬಳಸಿಕೊಂಡು ಸುಳ್ಳುಗಳನ್ನು ಹರಡಲು ಮತ್ತು ದಂಗೆಯನ್ನು ಪ್ರಚೋದಿಸಲು ಆರಿಸಿಕೊಂಡಿದ್ದಾರೆ. ಇದು ಭಾರತದ ಏಕತೆ ಮತ್ತು ಸಾರ್ವಭೌಮತೆಗೆ ಅಪಾಯವನ್ನುಂಟುಮಾಡುತ್ತದೆ, ”ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ