ಕರ್ನಾಟಕ ವಿವಿ ಕನ್ನಡ ಪಠ್ಯದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಆರೋಪ ; ಭುಗಿಲೆದ್ದ ವಿವಾದ

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯದ (Karnatak University) ಪಠ್ಯದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಲಾಗಿದ್ದು, ಈಗ ಪಠ್ಯ ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸಾರಂಗ ಮುದ್ರಿಸಿರುವ, ಪದವಿ ಕನ್ನಡ ಪಠ್ಯ ಪುಸ್ತಕದ ಬೆಳಗು -1 ಕೃತಿಯಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಧಾರವಾಡದ ನ್ಯಾಯವಾದಿ ಅರುಣ ಜೋಶಿ ಆಕ್ಷೇಪಿಸಿದ್ದಾರೆ. ʼʼಬಿಎ, ಬಿ ಮ್ಯೂಸಿಕ್, ಬಿಎಫ್ಎ, ಬಿಎಸ್‌‌ಡಬ್ಲ್ಯು, ಬಿವಿಎ ಪದವಿಗಳ ಪ್ರಥಮ ಸೆಮಿಸ್ಟರ್‌ನ ಕನ್ನಡ ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆʼʼ ಎಂದು ಅವರು ಆರೋಪಿಸಿದ್ದಾರೆ.

ಪುಸ್ತಕದ 4ನೇ ಅಧ್ಯಾಯದ ‘ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಎಂಬ ಲೇಖನದಲ್ಲಿ ‘ಭಾರತಾಂಬೆಯ ಕಲ್ಪನೆ’ ಎಂಬ ಉಪ ಶೀರ್ಷಿಕೆಯಡಿ, ʼʼಭಾರತ ಮಾತೆಯ ಚಿತ್ರವು ಹಿಂದೂ ಮಾತೆಯ ಚಿತ್ರವಾಗಿದೆ. ಇದು ಒಂದು ವರ್ಗ ಸಮುದಾಯದ ಕಲ್ಪನೆ ಆಗಿದೆ. ಇದನ್ನು ಇತರರು ಒಪ್ಪುವಂತೆ ಒತ್ತಾಯಿಸಲಾಗುತ್ತಿದೆʼʼ ಎಂದು ಮುದ್ರಿಸಲಾಗಿದೆ.
ʼʼಪ್ರತಿ ಸಭೆ, ಸಮಾರಂಭಗಳಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗಿದಾಗ ಉಳಿದವರೂ ಜೈ ಎನ್ನುತ್ತಾರೆ. ಈ ಜೈ ಎನ್ನುವ ಕಲ್ಪನೆ ಇನ್ನೊಬ್ಬರ ಸೋಲನ್ನು ನೆನಪಿಸುತ್ತದೆʼʼ ಎಂದು ಬರೆಯಲಾಗಿದೆ. ʼʼ ತಾಯಿ ಭುವನೇಶ್ವರಿ ಕೂಡ ಕೋಮುವಾದಿ ಮಾತೆ ಎನ್ನಲಾಗಿದೆ. ಮುಸ್ಲಿಮರಿಗೆ ಮೆಕ್ಕಾ ಇರುವಂತೆ ಹಿಂದೂಗಳಿಗೂ ಒಂದು ಪವಿತ್ರ ಕ್ಷೇತ್ರ ಅಯೋಧ್ಯಾ ಇರಲಿ ಅಂತ ಕೆಲ ಪರಿವಾರದವರು ಒತ್ತಾಯಿಸುತ್ತಾ ಬಂದಿದ್ದಾರೆʼʼ ಎಂದೂ ಮುದ್ರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು | ತನ್ನ ಒಪ್ಪಿಗೆಯಿಲ್ಲದೆ ಇನ್‌ಸ್ಟಾಗ್ರಾಮ್ ವೀಡಿಯೊ ಪೋಸ್ಟ್ ; ಮಹಿಳೆಯ ದೂರಿನ ನಂತರ ವ್ಯಕ್ತಿಯ ಬಂಧನ

ಅಲ್ಲಲ್ಲಿ ‘ಪರಿವಾರ’ ಮತ್ತು ‘ಸಂಘ ಪರಿವಾರ’ ಎಂಬ ಶಬ್ದ ಬಳಕೆ ಮಾಡಲಾಗಿದೆ. ಆ ಮೂಲಕ ಪರೋಕ್ಷವಾಗಿ ಆರ್.ಎಸ್.ಎಸ್. ಅನ್ನು ಪಠ್ಯದಲ್ಲಿ ಎಳೆದು ತರಲಾಗಿದೆ. .ಪಠ್ಯವು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಟೀಕಿಸುವ ಉದ್ದೇಶದಿಂದ “ಸಂಘ ಪರಿವಾರ” ನಂತಹ ಪದಗಳನ್ನು ಅವಹೇಳನಕಾರಿ ರೀತಿಯಲ್ಲಿ ಬಳಸುತ್ತದೆ ಎಂದು ಆರೋಪಿಸಲಾಗಿದೆ.
ಹಿರಿಯ ವಕೀಲ ಅರುಣ ಜೋಶಿ ಅವರು ಈ ವಿಷಯದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ  ಮತ್ತು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಇಬ್ಬರಿಗೂ ಪತ್ರ ಬರೆದಿದ್ದಾರೆ. ವಿವಾದಾತ್ಮಕ ಪಠ್ಯಕ್ರಮವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಕಾನೂನು ಹೋರಾಟ ಮಾಟುವುದಾಗಿ ಎಚ್ಚರಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement