ನವದೆಹಲಿ: 20 ವರ್ಷಗಳ ದಾಂಪತ್ಯ ಜೀವನದ ನಂತರ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಅವರು ಬೇರೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಹಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸವಿದ್ದು, ಇದೀಗ ಅವರಿಬ್ಬರ ವಿಚ್ಛೇದನದ ಕುರಿತು ಚರ್ಚೆ ನಡೆಯುತ್ತಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, 2007 ರಲ್ಲಿ ಆರ್ಯವೀರ್ ಜನಿಸಿದ್ದರೆ 2010 ರಲ್ಲಿ ವೇದಾಂತ ಜನಿಸಿದ್ದಾನೆ.
ಇನ್‌ಸ್ಟಾಗ್ರಾಮ್‌ನಲ್ಲಿ ಸೆಹ್ವಾಗ್ ಮತ್ತು ಆರತಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ ನಂತರ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ. ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.
2024 ರ ದೀಪಾವಳಿ ಆಚರಣೆಯ ಸಮಯದಲ್ಲಿ, ಸೆಹ್ವಾಗ್ ತನ್ನ ಪುತ್ರರು ಮತ್ತು ತಾಯಿಯೊಂದಿಗೆ ಫೋಟೋಗಳನ್ನು ಹಂಚಿಕೊಂಡರು. ಆದರೆ ಗಮನಾರ್ಹವಾಗಿ ಅದರಲ್ಲಿ ಆರತಿ ಇರಲಿಲ್ಲ, ಇದು ಅವರಿಬ್ಬರ ಮಧ್ಯೆ ಸಂಬಂಧ ಹಳಸಿದ ಬಗ್ಗೆ ಅನುಮಾನಕ್ಕೆ ಕಾರಣವಾಯಿತು. ಕೆಲವು ವಾರಗಳ ಹಿಂದೆ, ವಿಶ್ವ ನಾಗಯಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪೋಸ್ಟ್ ಮಾಡಿದ್ದ ಸೆಹ್ವಾಗ್ ಅದರಲ್ಲಿ ಪತ್ನಿ ಆರತಿಯ ಯಾವುದೇ ಉಲ್ಲೇಖ ಅಥವಾ ಚಿತ್ರವಿಲ್ಲ. ಸೆಹ್ವಾಗ್ ಅವರ ಪ್ರೊಫೈಲ್ ಇನ್ನೂ ದಂಪತಿಯ ಹಳೆಯ ಚಿತ್ರಗಳನ್ನು ಹೊಂದಿದ್ದರೂ, ಇತ್ತೀಚಿನ ಫೋಟೋಗಳು ಅಲ್ಲಿ ಇಲ್ಲದಿರುವುದು ವದಂತಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಆರತಿ ಅವರು ಅವರು ಜನಿಸಿದ್ದು, ಬೆಳೆದಿದ್ದು ನವದೆಹಲಿಯಲ್ಲಿ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಪ್ರೊಫೈಲ್‌ನಲ್ಲಿ ಯಾವುದೇ ಹೊಸ ಫೋಟೊಗಳನ್ನು ಹಂಚಿಕೊಂಡಿಲ್ಲ. ಅವರಿಬ್ಬರೂ ವದಂತಿಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ, ದಂಪತಿ ನಡುವೆ ಏನೋ ಸರಿಯಾಗಿಲ್ಲ ಎನ್ನುವ ಊಹಾಪೋಹಗಳಿಗೆ ಈ ಎಲ್ಲ ಅಂಶಗಳು ತುಪ್ಪ ಸುರಿದಿದೆ.
ನಿಮ್ಮ ಕಾಮೆಂಟ್ ಬರೆಯಿರಿ