ಮಂಗಳೂರು : ಮದುವೆ ನಿಶ್ಚಿತಾರ್ಥವಾಗಿದ್ದ ಹುಡುಗಿ ಜತೆ ಇನ್ಸ್ಟಾಗ್ರಾಮ್ ಲೈಕ್ ಬಗ್ಗೆ ನಡೆದ ಜಗಳವು ಯುವಕನ ಆತ್ಮಹತ್ಯೆಯಲ್ಲಿ ಕೊನೆಗೊಂಡ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಜನವರಿ 21ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಲ್ಪೇಲು ನಿವಾಸಿ ದಿ. ಯೋಗಿಶ ಅವರ ಪುತ್ರ ಚೇತನ್ (25) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಚೇತನ್ ದೈವದ ಪಾತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಮಂಗಳೂರು ತಾಲೂಕು ಕಂದಾವರ ಗ್ರಾಮದ ಓಣಿಬಾಗಿಲು ಮನೆ ನಿವಾಸಿ ದಿ. ಬಾಬು ಅವರ ಪುತ್ರಿ ಚೈತನ್ಯಾ ಎಂಬವರೊಂದಿಗೆ ಸುಮಾರು 8 ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು.
, ಜ. 21ರ ಬೆಳಿಗ್ಗೆ ಸುಮಾರು 11 ಗಂಟೆಗೆ ಚೇತನ್ ಮಾತ್ರ ಮನೆಯಲ್ಲಿದ್ದ. ತಾಯಿ ಪುಷ್ಪಾ ತನ್ನ ತವರು ಮನೆಗೆ ಹೋಗಿದ್ದರು. ಈ ವೇಳೆ ಚೈತನ್ಯಾ ಮೊಬೈಲ್ನಿಂದ ಪುಷ್ಪಾ ಅವರಿಗೆ ಕರೆ ಮಾಡಿ, ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮನೆಯಲ್ಲಿ ಮಲಗಿದ್ದು ಎದ್ದೇಳುತ್ತಿಲ್ಲ ಕೂಡಲೇ ಮನೆಗೆ ಬನ್ನಿ ಎಂದು ತಿಳಿಸಿದ್ದಾಳೆ.
ತಾಯಿ ಪುಷ್ಪಾ 11:30 ರ ವೇಳೆಗೆ ಬಂದು ನೋಡಿದಾಗ ಮನೆಯ ಬಾತ್ ರೂಂ ಮತ್ತು ಮನೆಯ ಮಧ್ಯೆ ಇರುವ ಪ್ಯಾಸೇಜ್ನಲ್ಲಿ ಚೇತನ್ ಮಲಗಿದ ಸ್ಥಿತಿಯಲ್ಲಿದ್ದ. ಎಬ್ಬಿಸಲು ಎಷ್ಟೇ ಪ್ರಯತ್ನಿಸಿದರೂ ಏಳಲಿಲ್ಲ. ನಂತರ ಪುಷ್ಪಾ ಅವರಿಗೆ ಮನೆಯ ಛಾವಣಿ ಕಡೆ ನೇಣು ಹಾಕಿದ ರೀತಿಯಲ್ಲಿ ಲುಂಗಿ ಇರುವುದು ಕಂಡಿದೆ. ಅವರು ಈ ಬಗ್ಗೆ ನೋಡಿ ಚೈತನ್ಯಾ ಬಳಿ ಪ್ರಶ್ನಿಸಿದ್ದಾರೆ.
ಆಗ, ಚೇತನ್ ಇನ್ಸ್ಟಾಗ್ರಾಂನಲ್ಲಿ ಹುಡುಗಿಯೊಬ್ಬಳಿಗೆ ಲೈಕ್ ಮಾಡಿದ್ದಕ್ಕೆ ಪ್ರಶ್ನಿಸಲು ತಾನು ಮನೆಗೆ ಬಂದಿದ್ದು, ಈ ವಿಚಾರದ ಬಗ್ಗೆ ಜಗಳವಾಗಿತ್ತು. ಇದರಿಂದ ಬೇಸರಗೊಂಡ ಚೇತನ್ ಮನೆಯೊಳಗೆ ಓಡಿ ಹೋಗಿ ಛಾವಣಿಗೆ ಲುಂಗಿಯಲ್ಲಿ ನೇಣು ಬಿಗಿದುಕೊಂಡಿದ್ದು, ತಾನೇ ಆತನನ್ನು ಕೆಳಗಿಳಿಸಿ ಆರೈಕೆ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ಹೇಳಲಾಗಿದೆ. ಈ ಬಗ್ಗೆಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ