ಹುಬ್ಬಳ್ಳಿ; ಮಹಾನಗರದ ಲಿಂಗರಾಜ ನಗರದಲ್ಲಿರುವ ಗೋಲ್ಡನ್ ಹೈಟ್ಸ್ ಬಾರ್ ಪಾರ್ಕಿಂಗ್ ಜಾಗದಲ್ಲಿ ಆಕಾಶ ವಾಲ್ಮೀಕಿ ಎಂಬ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ (Murder) ಮಾಡಲಾಗಿದೆ. ತಡರಾತ್ರಿ ನಡೆದ ಕೊಲೆ ಬಗ್ಗೆ ಮಾಹಿತಿ ಪಡೆದ ಪೊಲೀಸರು (Police) ಆರೋಪಿಗಳನ್ನು ಬಂಧಿಸಲು ತೆರಳಿದಾಗ ಅವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ನಂತರ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಮೂವರನ್ನೂ ಬಂಧಿಸಿದ್ದಾರೆ.
ಲಿಂಗರಾಜ ನಗರದಲ್ಲಿ ತಡರಾತ್ರಿ ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಕೊಲೆ ಮಾಡಿದ ನಂತರ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆನ್ನಟ್ಟಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಪೊಲೀಸರು ಹಿಡಿಯಲು ಯತ್ನಿಸಿದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆಗ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದು, ಇಬ್ಬರ ಎರಡೂ ಕಾಲಿಗೆ ಮತ್ತು ಓರ್ವನ ಒಂದು ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಮ್ಸ್ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಭೇಟಿ ನೀಡಿ ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಗುಂಡೇಟು ತಿಂದ ಆರೋಪಿಗಳನ್ನೂ ಪರಿಶೀಲಿಸಿದ್ದಾರೆ. ಘಟನೆ ಕುರಿತು ಮಾತನಾಡಿದ ಅವರು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಆಕಾಶ ಎಂಬ ಯುವಕನ ಕೊಲೆ ಮಾಡಡಿದಂತೆ ತೋರುತ್ತಿದೆ. ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.
ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು, ಪೊಲೀಸರಿಗೆ ಮಾಹಿತಿ ಗೊತ್ತಾಗಿ ಬಂಧನಕ್ಕೆ ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಪೊಲೀಸರು ಮೂವರ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿಗಳಾದ ಅಭಿಷೇಕ, ಯಲ್ಲಪ್ಪ ಮತ್ತು ವಿನೋದ ಎಂಬವರ ಮೇಲೆ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷದ ಶಿವರಾತ್ರಿ ದಿನ ಗಲಾಟೆಯಾಗಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಕೆಲವರು ಇದ್ದಾರೆಂಬ ಅನುಮಾನವಿದ್ದು, ಅವರ ಬಂಧನಕ್ಕೆ ಜಾಲ ಬೀಸಿದ್ದೇವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ನಿಮ್ಮ ಕಾಮೆಂಟ್ ಬರೆಯಿರಿ