ರಾಯಚೂರು: ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ರಾಯಚೂರು (Raichur) ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ವ್ಯಕ್ತಿಯೋರ್ವನ ಸಾವಿಗೆ ಈ ಮಹಿಳೆಯೇ ಕಾರಣ ಎಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ನಾಲ್ವರು ವ್ಯಕ್ತಿಗಳು ಗ್ರಾಮಸ್ಥರ ಮುಂದೆಯೇ ಅಮಾನವೀಯವಾಗಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.
20 ದಿನದ ಹಿಂದೆ ದುರುಗಪ್ಪ ಎಂಬಾತ ಮೂರ್ಛೆ ರೋಗದಿಂದ ಮೃತಪಟ್ಟಿದ್ದ. ಆತ ಪರಿಚಯವಿದ್ದ ಈ ಮಹಿಳೆಯ ಜೊತೆಗೆ ತೆರಳಿದ್ದಾಗ ವ್ಯಕ್ತಿ ಮೃತಪಟ್ಟಿದ್ದ. ಅದಕ್ಕಾಗಿ ಆತನ ಸಾವಿಗೆ ಈಕೆಯೇ ಕಾರಣ ಎಂದು ಶಂಕಿಸಿ ಮಹಿಳೆಯನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ ಥಳಿಸಿದ್ದಾರೆ. ಜನವರಿ 27ರ ಸಂಜೆ ವೇಳೆಯಲ್ಲಿ ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ ಮತ್ತು ರೇಣುಕಾ ಎಂಬವರು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿ ಗೊತ್ತಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ ಜಾಲಹಳ್ಳಿ ಠಾಣೆ ಪೊಲೀಸರು ಹಲ್ಲೆ ಆರೋಪದಡಿ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ