ಚಂಡೀಗಢ ಮೇಯರ್ ಚುನಾವಣೆ | ಬಿಜೆಪಿ ಅಭ್ಯರ್ಥಿಯ ಅಚ್ಚರಿಯ ಗೆಲುವು ; ಬಹುಮತ ಇದ್ರೂ ಮಂಡಿಯೂರಿದ ಎಎಪಿ-ಕಾಂಗ್ರೆಸ್‌ ಮೈತ್ರಿಕೂಟ…!

ಚಂಡೀಗಢ: ಎಎಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತವಿದ್ದರೂ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರ್‌ಪ್ರೀತ್ ಕೌರ್ ಬಬ್ಲಾ ಅವರು ಎಎಪಿಯ ಪ್ರೇಮ್ ಲತಾ ವಿರುದ್ಧ 19 -17 ಮತಗಳಿಂದ ಜಯಗಳಿಸಿದ್ದಾರೆ.
ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ಪೈಪೋಟಿ ಏರ್ಪಟ್ಟಿತ್ತು. ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ನ ಅಸೆಂಬ್ಲಿ ಹಾಲ್‌ನಲ್ಲಿ ಗುರುವಾರ ಬೆಳಿಗ್ಗೆ 11:20 ಕ್ಕೆ ಮತದಾನ ಪ್ರಾರಂಭವಾಯಿತು ಮತ್ತು ಮಧ್ಯಾಹ್ನ 12:19 ಕ್ಕೆ ಮುಕ್ತಾಯಗೊಂಡಿತು.
ಚಂಡೀಗಢ ಮುನ್ಸಿಪಲ್ ಕಾರ್ಪೋರೇಶನ್ ಚುನಾಯಿತ ಕೌನ್ಸಿಲರ್‌ಗಳು ಮತ್ತು ಚಂಡೀಗಢ ಸಂಸದ ಸೇರಿದಂತೆ 35 ಸದಸ್ಯರನ್ನು ಒಳಗೊಂಡಿದೆ, ಸಂಸದರು ಪದನಿಮಿತ್ತ ಸದಸ್ಯರಾಗಿ ಮತದಾನದ ಹಕ್ಕುಗಳನ್ನು ಹೊಂದಿದ್ದಾರೆ.

ಚಂಡೀಗಢ ಮುನ್ಸಿಪಲ್ ಕಾರ್ಪೋರೇಶನ್ ನಲ್ಲಿ ಎಎಪಿ 13 ಸದಸ್ಯರು, ಕಾಂಗ್ರೆಸ್ 6, ಬಿಜೆಪಿ 16 ಮತ್ತು ಚಂಡೀಗಢ ಸಂಸದ(ಕಾಂಗ್ರೆಸ್)ಗೆ 1 ಮತ ಇತ್ತು.
ಚುನಾವಣೆಗೆ ಕೆಲವು ದಿನಗಳ ಮೊದಲು, ಕಾಂಗ್ರೆಸ್ ಕೌನ್ಸಿಲರ್ ಗುರ್ಬಕ್ಸ್ ರಾವತ್ ಬಿಜೆಪಿ ಸೇರಿದ್ದರು. ಇದು ಬಿಜೆಪಿಯ ಬಲ 16 ಕ್ಕೆ ಹೆಚ್ಚುವಂತಾಗಿತ್ತು. ಆದರೂ ಬಿಜೆಪಿ ಮೂರು ಹೆಚ್ಚುವರಿ ಮತಗಳನ್ನು ಪಡೆಯಿತು.
ಗುಪ್ತ ಮತದಾನದ ಮೂಲಕ ಚುನಾವಣೆ ನಡೆಸಲಾಯಿತು. ನಾಮನಿರ್ದೇಶಿತ ಕೌನ್ಸಿಲರ್ ರಮ್ನೀಕ್ ಸಿಂಗ್ ಬೇಡಿ ಅವರನ್ನು ಚುನಾವಣಾ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಯಶ್ರೀ ಠಾಕೂರ್ ಅವರನ್ನು ಚುನಾವಣೆಯ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಸ್ವತಂತ್ರ ವೀಕ್ಷಕರನ್ನಾಗಿ ನೇಮಿಸಿತ್ತು. ಚುನಾವಣಾ ಪ್ರಕ್ರಿಯೆಗಳನ್ನು ವೀಡಿಯೊ ಚಿತ್ರೀಕರಣ ಮಾಡುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಪ್ರಮುಖ ಸುದ್ದಿ :-   ನಲ್ಲಿ ನೀರು ವಿವಾದ: ಕೇಂದ್ರ ಸಚಿವರ ಇಬ್ಬರು ಸೋದರಳಿಯಂದಿರ ನಡುವೆ ಗುಂಡಿನ ಚಕಮಕಿ, ಓರ್ವ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement