ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದ ಸಂಗಮ ಪ್ರದೇಶದಲ್ಲಿ ಬುಧವಾರ ನಸುಕಿನ ಜಾವ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟ ಹಾಗೂ ಇತರ 60 ಜನರು ಗಾಯಗೊಂಡ ಒಂದು ದಿನದ ನಂತರ, ರಾಜ್ಯ ಸರ್ಕಾರವು ಸುರಕ್ಷತಾ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.
ಇಡೀ ಜಾತ್ರೆ ಪ್ರದೇಶವನ್ನು ವಾಹನ ರಹಿತ ವಲಯ ಎಂಬ ಘೋಷಣೆ ಸೇರಿದಂತೆ ಐದು ಪ್ರಮುಖ ಬದಲಾವಣೆಗಳನ್ನುಜಾರಿಗೆ ತಂದಿದೆ.
ಕುಂಭಮೇಳದ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾದ ಮೌನಿ ಅಮಾವಾಸ್ಯೆಯಂದು ಪವಿತ್ರ ಸ್ನಾನಕ್ಕಾಗಿ ಲಕ್ಷಾಂತರ ಯಾತ್ರಿಕರು ಸಂಗಮ ಪ್ರದೇಶ ತಲುಪಲು ಪ್ರಯತ್ನಿಸುತ್ತಿದ್ದಾಗ ಕಾಲ್ತುಳಿತದ ದುರಂತ ಬುಧವಾರ ಸಂಭವಿಸಿದೆ.
ಮಹಾ ಕುಂಭದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ವೈಭವ ಕೃಷ್ಣ ಪ್ರಕಾರ, ಪವಿತ್ರ ನೀರನ್ನು ತಲುಪುವ ಪ್ರಯತ್ನದಲ್ಲಿ ಯಾತ್ರಿಕರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಗಿದೆ.
5 ಪ್ರಮುಖ ಬದಲಾವಣೆಗಳು…
ಸಂಪೂರ್ಣ ವಾಹನ ರಹಿತ ವಲಯ: ಮಹಾಕುಂಭ ಮೇಳದ ಪ್ರದೇಶದಲ್ಲಿ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ವಿವಿಐಪಿ ಪಾಸ್‌ಗಳನ್ನು ರದ್ದುಗೊಳಿಸಲಾಗಿದೆ: ಯಾವುದೇ ವಿಶೇಷ ಪಾಸ್‌ಗಳು ವಾಹನ ಪ್ರವೇಶವನ್ನು ಅನುಮತಿಸುವುದಿಲ್ಲ, ಎಲ್ಲ ವಿನಾಯಿತಿಗಳನ್ನು ತೆಗೆದುಹಾಕಲಾಗಿದೆ.
ಏಕಮುಖ ಮಾರ್ಗ ಜಾರಿ: ಭಕ್ತಾದಿಗಳ ಸಂಚಾರ ಸುಗಮಗೊಳಿಸಲು ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ವಾಹನ ಪ್ರವೇಶ ನಿರ್ಬಂಧ: ಜನದಟ್ಟಣೆ ಕಡಿಮೆ ಮಾಡಲು ಮಹಾಕುಂಬ ಮೇಳ ಪ್ರದೇಶಕ್ಕೆ ವಾಹನ ಪ್ರವೇಶ ನಿರ್ಬಂಧಿಸಲಾಗಿದ್ದು, ಪ್ರಯಾಗರಾಜ್‌ನಿಂದ ಆಗಮಿಸುವ ವಾಹನಗಳನ್ನು ಗಡಿಯಲ್ಲಿ ನಿಲ್ಲಿಸಲಾಗುತ್ತಿದೆ.
ಫೆಬ್ರುವರಿ 4ರವರೆಗೆ ಕಟ್ಟುನಿಟ್ಟಿನ ನಿರ್ಬಂಧ: ಕ್ರಮವನ್ನು ಕಾಯ್ದುಕೊಳ್ಳಲು ಫೆಬ್ರುವರಿ 4ರವರೆಗೆ ನಾಲ್ಕು ಚಕ್ರದ ವಾಹನಗಳ ನಗರದ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜನದಟ್ಟಣೆಯ ಮ್ಯಾನೇಜ್ಮೆಂಟ್ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು, ಐಎಎಸ್ ಅಧಿಕಾರಿಗಳಾದ ಆಶಿಶ್ ಗೋಯಲ್ ಮತ್ತು ಭಾನು ಗೋಸ್ವಾಮಿ ಅವರಿಗೆ ತಕ್ಷಣವೇ ಪ್ರಯಾಗರಾಜ್ ತಲುಪಲು ಸೂಚಿಸಲಾಗಿದೆ. ವಿಜಯ ಕಿರಣ ಅವರೊಂದಿಗೆ 2019 ರ ಅರ್ಧ ಕುಂಭವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಇಬ್ಬರೂ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಆ ಸಂದರ್ಭದಲ್ಲಿ, ಭಾನು ಗೋಸ್ವಾಮಿ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕುಂಭಮೇಳ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರೆ, ಆಶಿಶ್ ಗೋಯಲ್ ಅವರು ಅಲಹಾಬಾದ್‌ನ ಕಮಿಷನರ್ ಆಗಿದ್ದರು, ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು.
ಹೆಚ್ಚುವರಿಯಾಗಿ, ದೊಡ್ಡ-ಪ್ರಮಾಣದ ಈವೆಂಟ್‌ಗಳನ್ನು ನಿರ್ವಹಿಸುವಲ್ಲಿ ಈ ಹಿಂದೆ ಅನುಭವ ಹೊಂದಿರುವ ಐದು ವಿಶೇಷ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳನ್ನು ಮಹಾ ಕುಂಭ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ನಿಯೋಜಿಸಲಾಗಿದೆ.
ಕಾಲ್ತುಳಿತದ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಜನಸಂದಣಿ ನಿಯಂತ್ರಣ, ಸಂಚಾರ ನಿರ್ವಹಣೆ ಮತ್ತು ಅಂತರ-ಇಲಾಖೆಯ ಸಮನ್ವಯದ ಮೇಲೆ ಕೇಂದ್ರೀಕರಿಸುವ ಬಹು ಮಾರ್ಗಸೂಚಿಗಳನ್ನು ಹೊರಡಿಸಿದರು. ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ)ರ ಮೂಲಕ ಮಹಾಕುಂಭದ ವ್ಯವಸ್ಥೆಗಳ ಪರಿಶೀಲನೆಗೆ ಮುಖ್ಯಮಂತ್ರಿ ಆದೇಶಿಸಿದರು.
ತಡರಾತ್ರಿಯ ವೀಡಿಯೊ ಕಾನ್ಫರೆನ್ಸ್‌ನಲ್ಲಿ, ಆದಿತ್ಯನಾಥ ಅವರು ಪ್ರಯಾಗರಾಜ್, ಕೌಶಾಂಬಿ, ವಾರಾಣಸಿ, ಅಯೋಧ್ಯೆ, ಮಿರ್ಜಾಪುರ, ಬಸ್ತಿ, ಜೌನ್ಪುರ ಮತ್ತು ರಾಯಬರೇಲಿ ಸೇರಿದಂತೆ ಅನೇಕ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜನಸಂದಣಿ ನಿರ್ವಹಣೆಯ ಕ್ರಮಗಳು..
ಪ್ರಯಾಗರಾಜ್‌ನಾದ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರು ರೈಲು ನಿಲ್ದಾಣಗಳಲ್ಲಿ ಉಪಸ್ಥಿತರಿದ್ದು, ಮನೆಗೆ ಮರಳಲು ತಯಾರಿ ನಡೆಸುತ್ತಿದ್ದಾರೆ, ಆದಿತ್ಯನಾಥ ಅವರು ರೈಲು ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವಂತೆ ಸಾರಿಗೆ ಸಂಸ್ಥೆಗೆ ಸೂಚಿಸಲಾಗಿದೆ.
ಪ್ರದೇಶದಲ್ಲಿ ಜನಸಂದಣಿಯ ಒತ್ತಡವನ್ನು ನಿರ್ವಹಿಸಲು ಗಡಿ ಬಿಂದುಗಳಲ್ಲಿ ಹೋಲ್ಡಿಂಗ್ ಪ್ರದೇಶಗಳನ್ನು ಸ್ಥಾಪಿಸಲಾಗಿದೆ. ಪರಿಸ್ಥಿತಿ ಸುಗಮವಾದಾಗ ಮಾತ್ರ ಭಕ್ತರಿಗೆ ತೆರಳಲು ಅವಕಾಶ ನೀಡಲಾಗುತ್ತದೆ. ಈ ಪ್ರದೇಶಗಳಲ್ಲಿ ಆಹಾರ, ಕುಡಿಯುವ ನೀರು ಮತ್ತು ನಿರಂತರ ವಿದ್ಯುತ್ ಪೂರೈಕೆಗೆ ಸಾಕಷ್ಟು ವ್ಯವಸ್ಥೆ ಇರುತ್ತದೆ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.
ಅಯೋಧ್ಯೆ, ಕಾನ್ಪುರ, ಫತೇಪುರ್, ಲಕ್ನೋ, ಪ್ರತಾಪಗಢ ಮತ್ತು ವಾರಾಣಸಿ ಸೇರಿದಂತೆ ಪ್ರಯಾಗರಾಜ್‌ನಿಂದ ಹೋಗುವ ಪ್ರಮುಖ ಮಾರ್ಗಗಳಲ್ಲಿ ಹೆಚ್ಚಿದ ಗಸ್ತು ಮತ್ತು ಸುವ್ಯವಸ್ಥಿತ ಟ್ರಾಫಿಕ್ ಓಡಾಟವನ್ನು ಕಡ್ಡಾಯಗೊಳಿಸಲಾಗಿದೆ.
ನ್ಯಾಯಾಂಗ ಆಯೋಗ ಸ್ಥಾಪನೆ
ಕಾಲ್ತುಳಿತಕ್ಕೆ ಕಾರಣಗಳ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ನೇಮಿಸಲಾಗಿದೆ. ಸಮಿತಿಯಲ್ಲಿ ನ್ಯಾಯಮೂರ್ತಿ ಹರ್ಷಕುಮಾರ, ಮಾಜಿ ಪೊಲೀಸ್ ಮಹಾನಿರ್ದೇಶಕ ವಿಕೆ ಗುಪ್ತಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ವಿಕೆ ಸಿಂಗ್ ಇದ್ದಾರೆ. ನ್ಯಾಯಾಂಗ ತನಿಖೆಯ ಜೊತೆಗೆ ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ