ರಾಷ್ಟ್ರಪತಿ ಮುರ್ಮು ಬಗ್ಗೆ ಹೇಳಿಕೆ; ಸೋನಿಯಾ ಗಾಂಧಿಗೆ ಎದುರಾಯ್ತು ಸಂಕಷ್ಟ

ಪಾಟ್ನಾ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ‘ಪೂವರ್ ಲೇಡಿ’ (Poor lady) ಎಂದು ಕರೆದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ವಿರುದ್ಧ ಬಿಹಾರದ ಮುಜಫರ್‌ಪುರದಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಸುಧೀರ ಓಜಾ ಎಂಬವರು ಸಿಜಿಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಫೆ. 10ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಗೌರವಾನ್ವಿತ ರಾಷ್ಟ್ರಪತಿ ಅವರ ವಿರುದ್ಧ ಈ ರೀತಿ ಹೇಳಿಕೆ ನೀಡಿರುವುದರಿಂದ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಸುಧೀರ ಓಜಾ ಒತ್ತಾಯಿಸಿದ್ದಾರೆ.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದ್ದು ಅವರ ವಿರುದ್ಧವೂ ಕಾನೂನು ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.

ದೂರು ದಾಖಲಿಸುವ ಮುನ್ನ ಮಾಧ್ಯಮದ ಜತೆ ಮಾತನಾಡಿದ ಓಜಾ, ʼʼಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ದ್ರಾಪದಿ ಮುರ್ಮು ಅವರನ್ನು ಅವಮಾನಿಸಿದ್ದಾರೆ. ದೇಶದ ಅತ್ಯಂತ ಗೌರವಾನ್ವಿತ ಹುದ್ದೆಯಲ್ಲಿರುವವರಿಗೆ ಎಸಗಿದ ಅವಮಾನವಿದು. ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೂಡ ಈ ಪ್ರಕರಣದಲ್ಲಿ ತಪ್ಪಿತಸ್ಥರು. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ ಅಡಿಯಲ್ಲಿ ದೂರು ದಾಖಲಿಸಬೇಕುʼʼ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

ಸೋನಿಯಾ ಗಾಂಧಿ ಹೇಳಿದ್ದೇನು?
ಜ. 31ರಂದು ಆರಂಭವಾದ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ್ದರು. ಭಾಷಣದ ಬಳಿಕ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ʼʼಪೂವರ್‌ ಲೇಡಿ, ಭಾಷಣ ಮುಗಿಸುವ ಹೊತ್ತಿಗೆ ಸುಸ್ತಾಗಿ ಹೋಗಿದ್ದರು. ಅವರಿಗೆ ಮಾತನಾಡಲು ಕಷ್ಟ ಆಗುತ್ತಿತ್ತುʼʼ ಎಂದು ಹೇಳಿದ್ದರು. ಜತೆಗೆ ಭಾಷಣ ಬೋರ್‌ ಆಗಿತ್ತು ಎಂದಿದ್ದರು. ಸೋನಿಯಾ ಜತೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಉಪಸ್ಥಿತರಿದ್ದರು.
ಸೋನಿಯಾ ಗಾಂಧಿ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್‌ ನಾಯಕಿ ವಿರುದ್ಧ ಕಿಡಿ ಕಾರಿದ್ದರು. ಇದು ದುರದೃಷ್ಟಕರ ಮತ್ತು ಅವಮಾನಕರ ಹೇಳಿಕೆ. ಕಾಂಗ್ರೆಸ್‌ ನಾಯಕರು ಉನ್ನತ ಹುದ್ದೆಯ ಘನತೆಗೆ ಹಾನಿ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ ಎಂದು ರಾಷ್ಟ್ರಪತಿ ಭವನ ಸಹ ಹೇಳಿಕೆ ನೀಡಿತ್ತು. ರಾಷ್ಟ್ರಪತಿ ಅವರು ಯಾವುದೇ ಹಂತದಲ್ಲಿ ಸುಸ್ತಾಗಿರಲಿಲ್ಲ. ವಾಸ್ತವವಾಗಿ ಅವರು ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು ಮತ್ತು ರೈತರ ಬಗ್ಗೆ ಮಾತನಾಡುವಾಗ ಎಂದಿಗೂ ಸುಸ್ತಾಗುವುದಿಲ್ಲ ಎಂದು ರಾಷ್ಟ್ರಪತಿ ಭವನ ತಿಳಿಸಿತ್ತು.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement