ವಂಚನೆ ಪ್ರಕರಣ : ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರು ದೋಷಿಗಳು

ಬೆಂಗಳೂರು : ನಕಲಿ ವೇತನ ಸರ್ಟಿಫಿಕೇಟ್‌ಗಳನ್ನು ಸಲ್ಲಿಸಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ₹7.17 ಕೋಟಿ ಹಣ ದುರ್ಬಳಕೆ ಮಾಡಿರುವ ಪ್ರಕರಣದಲ್ಲಿ ಮಾಜಿ ಸಚಿವ ಎಸ್‌. ಎನ್‌. ಕೃಷ್ಣಯ್ಯ ಶೆಟ್ಟಿ ಸೇರಿ ನಾಲ್ವರನ್ನು ದೋಷಿಗಳು ಎಂದು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಸಿಬಿಐ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಇಂದು, ಗುರುವಾರ ಪ್ರಕಟಿಸಿದ್ದಾರೆ.
ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ವ್ಯವಸ್ಥಾಪಕ ಹಾಗೂ ಒಂದನೇ ಆರೋಪಿ ಎಂಟಿವಿ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಕೆ ಮುನಿರಾಜು, ಕೆ ಶ್ರೀನಿವಾಸ ಅವರನ್ನು ದೋಷಿಗಳು ಎಂದು ನ್ಯಾಯಾಲಯ ಹೇಳಿದೆ. ಐದನೇ ಆರೋಪಿ ಬಿಡ್ಡಪ್ಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ. ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಬೇಕಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಕೃಷ್ಣಯ್ಯ ಶೆಟ್ಟಿ ಮತ್ತು ಇತರ ಆರೋಪಿಗಳು ಮೆಸರ್ಸ್‌ ಬಾಲಾಜಿ ಕೃಪಾ ಎಂಟರ್‌ಪ್ರೈಸಸ್‌ ಮೂಲಕ ನಕಲಿ ವೇತನ ಸರ್ಟಿಫಿಕೇಟ್‌ಗಳು, ಎಚ್‌ಎಎಲ್‌, ಐಟಿಐ, ಬಿಇಎಂಎಲ್‌, ಬಿಎಂಟಿಸಿ, ಬೆಸ್ಕಾಂ, ಎಡಿಇ, ಕೆಎಸ್‌ಆರ್‌ಟಿಸಿ, ಬಿಎಸ್‌ಎನ್‌ಎಲ್‌ ನೋವಾ ಟೆಕ್ನಾಲಜೀಸ್‌ ಇತ್ಯಾದಿ ಸಂಸ್ಥೆಗಳಲ್ಲಿ ಕೆಲಸ ಮಾಡದ ಉದ್ಯೋಗಿಗಳ ಫಾರ್ಮ್‌ ನಂಬರ್‌ 16 ಸಲ್ಲಿಸಿ ₹7.17 ಕೋಟಿ ಮೊತ್ತದ 181 ಗೃಹ ಸಾಲಗಳನ್ನು ಪಡೆದಿದ್ದಾರೆ. ಈ ಪೈಕಿ ವಿವಿಧ ಖಾತೆಗಳ ₹3.53 ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದು, ಆ ಮೂಲಕ ಕಾನೂನುಬಾಹಿರವಾಗಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕೆ ಜಿ ರಸ್ತೆಯಲ್ಲಿದ್ದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನ ಮುಖ್ಯ ವಿಚಕ್ಷಣಾಧಿಕಾರಿಯು 30.1.2008ರಂದು ನೀಡಿದ ದೂರು ಆಧರಿಸಿ ಸಿಬಿಐ ಐಪಿಸಿ ಸೆಕ್ಷನ್‌ಗಳಾದ 120ಬಿ, 409, 419, 420, 467 ಮತ್ತು 471 ಹಾಗೂ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಪ್ರಕರಣ ದಾಖಲಿಸಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| 28 ಕಿಮೀ ರಾಮಸೇತು ಸಮುದ್ರ ಈಜಿದ ಹುಬ್ಬಳ್ಳಿ ಪೊಲೀಸ್‌ ಅಧಿಕಾರಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement