ನವದೆಹಲಿ: ಎನ್ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ಮೂರು ದಿನಗಳ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಒಮ್ಮತ ಮೂಡದ ಕಾರಣ ಮಣಿಪುರವನ್ನು ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ. ರಾಜ್ಯ ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಲಾಗಿದೆ.
ಭಾನುವಾರ ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಆರಂಭವಾಗಬೇಕಿದ್ದ ಬಜೆಟ್ ಅಧಿವೇಶನವನ್ನು ರಾಜ್ಯಪಾಲ ಅಜಯ್ ಭಲ್ಲಾ ರದ್ದುಗೊಳಿಸಿದ್ದರು.ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಬಗ್ಗೆ ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸುತ್ತಿದೆ. ಆದರೆ ಇನ್ನೂ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ
ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಸುಮಾರು ಎರಡು ವರ್ಷಗಳ ನಂತರ ಮತ್ತು ಪ್ರತಿಪಕ್ಷಗಳ ಒತ್ತಡದ ಮಧ್ಯೆ, ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು.
ಜನಾಂಗೀಯ ಹಿಂಸಾಚಾರದಲ್ಲಿ ಸಿಂಗ್ ಅವರ ಪಾತ್ರವನ್ನು ಆರೋಪಿಸಿ ಸೋರಿಕೆಯಾದ ಆಡಿಯೊ ಕ್ಲಿಪ್‌ಗಳ ಸತ್ಯಾಸತ್ಯತೆಯ ಬಗ್ಗೆ ಸೀಲ್ ಮಾಡಿದ ಕವರ್ ನಲ್ಲಿ ಫೊರೆನ್ಸಿಕ್ ವರದಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ನಂತರ ಮಣಿಪುರ ಮುಖ್ಯಮಂತ್ರಿಯ ರಾಜೀನಾಮೆ ಬಂದಿದೆ. ಕುಕಿಗಳೊಂದಿಗಿನ ಹಿಂಸಾಚಾರದ ಸಮಯದಲ್ಲಿ ರಾಜ್ಯ ಸರ್ಕಾರದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲು ಮೈತಿ ಗುಂಪುಗಳಿಗೆ ಅವಕಾಶ ನೀಡಲಾಯಿತು ಎಂದು ಸಿಂಗ್ ಸೂಚಿಸಿದ ಸಂಭಾಷಣೆಗಳನ್ನು ಈ ಟೇಪ್‌ಗಳು ಒಳಗೊಂಡಿವೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ