ಕರ್ನಾಟಕದಲ್ಲಿ ಜಿಪಂ, ತಾಪಂ ಚುನಾವಣೆಗೆ ಕೊನೆಗೂ ಕಾಲ ಸನ್ನಿಹಿತ…

ಬೆಂಗಳೂರು : ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಮೀಸಲು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೇ ಅಂತ್ಯದೊಳಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟಿಗೆ ತಿಳಿಸಿದೆ.
ರಾಜ್ಯ ಸರ್ಕಾರದ ಮುಚ್ಚಳಿಕೆಯನ್ನು ಆಧರಿಸಿ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಇತ್ಯರ್ಥಪಡಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಕ್ಷೇತ್ರ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ವಿಫಲವಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲು ಏಕಸದಸ್ಯ ಪೀಠದ ಆದೇಶ ಪಾಲಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು 2023ರಲ್ಲಿ ಸಲ್ಲಿಸಲಾದ ಎರಡು ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಮತ್ತು ಎಂ ಐ ಅರುಣ ಅವರ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಪಡಿಸಿತು ಎಂದು ವರದಿ ಹೇಳಿದೆ.

ನ್ಯಾಯಾಲಯಕ್ಕೆ ನೀಡಿರುವ ವಾಗ್ದಾನದಂತೆ ರಾಜ್ಯ ಸರ್ಕಾರ ನಡೆದುಕೊಂಡರೆ ಜೂನ್‌ ಅಥವಾ ಜುಲೈ ಅಥವಾ ಆಗಸ್ಟ್‌ನಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತಗಳಿಗೆ ಚುನಾವಣೆ ನಡೆಯಬಹುದಾಗಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ, “ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ಹೆಚ್ಚೆಂದರೆ ಮೇ ಅಂತ್ಯದೊಳಗೆ ನೀಡಲಾಗುವುದು. ಈ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬಹುದಾಗಿದ್ದು, ಈ ಸಂಬಂಧ ಅಫಿಡವಿಟ್‌ ಸಲ್ಲಿಸಲಾಗುತ್ತದೆ. ಮೇನಲ್ಲಿ ಮೀಸಲಾತಿ ಪಟ್ಟಿ ಒದಗಿಸುತ್ತೇವೆ. ಆಯೋಗವು ಜೂನ್‌, ಜುಲೈ, ಆಗಸ್ಟ್‌ನಲ್ಲಿ ಚುನಾವಣೆ ನಡೆಸಬಹುದು. ಕ್ಷೇತ್ರ ಪುನರ್‌ ವಿಂಗಡಣೆಯಾಗದಿದ್ದರಿಂದ ನಾವು ಕಾಲಾವಕಾಶ ಪಡೆದುಕೊಂಡಿದ್ದೆವು” ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು “ಏಕಸದಸ್ಯ ಪೀಠದ ಆದೇಶದಂತೆ ಮೀಸಲಾತಿ ಪಟ್ಟಿಯನ್ನು ಒದಿಗಿಸದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಈಗ ಸರ್ಕಾರವು ಮೇ ಅಂತ್ಯದ ವೇಳೆಗೆ ಕ್ಷೇತ್ರಗಳ ಮೀಸಲಾತಿ ಪಟ್ಟಿ ಅಧಿಸೂಚನೆ ಪ್ರಕಟಿಸುವ ವಾಗ್ದಾನ ನೀಡಿರುವುದನ್ನು ನ್ಯಾಯಾಲಯ ದಾಖಲು ಮಾಡಿಕೊಳ್ಳಬೇಕು. ಮೀಸಲಾತಿ ಪಟ್ಟಿ ದೊರೆತ ಬಳಿಕ ಅಂತಿಮವಾಗಿ ರಾಜ್ಯ ಚುನಾವಣಾ ಆಯೋಗವು ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಿದೆ. ರಾಜ್ಯ ಸರ್ಕಾರ ವಾಗ್ದಾನಕ್ಕೆ ತಕ್ಕಂತೆ ನಡೆಯದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಂದುವರಿಸುವ ಸ್ವಾತಂತ್ರ್ಯವನ್ನು ಆಯೋಗಕ್ಕೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ಪೀಠವು ಮೀಸಲಾತಿ ಪಟ್ಟಿ ನೀಡುವ ಮುಚ್ಚಳಿಕೆಯಂತೆ ನಡೆಯದಿದ್ದರೆ ಚುನಾವಣಾ ಆಯೋಗವು ನ್ಯಾಯಾಂಗ ನಿಂದನೆ ಅರ್ಜಿ ಮುಂದುವರಿಸುವ ಸ್ವಾತಂತ್ರ್ಯ ಹೊಂದಿದೆ ಎಂದು ಹೇಳಿ ಎಲ್ಲಾ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಇತ್ಯರ್ಥಪಡಿಸಿತು.
ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಕ್ಷೇತ್ರಗಳಿಗೆ 12 ವಾರಗಳಲ್ಲಿ ಮೀಸಲಾತಿ ಪ್ರಕಟಿಸಲಾಗುವುದು ಎಂದು ರಾಜ್ಯ ಸರ್ಕಾರವು 2023ರ ಡಿಸೆಂಬರ್ 19ಕ್ಕೆ ನ್ಯಾಯಾಲಯಕ್ಕೆ ಭರವಸೆ ಕೊಟ್ಟಿತ್ತು. ಅದನ್ನು ಪಾಲಿಸಿಲ್ಲ ಎಂದು ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

ಪ್ರಮುಖ ಸುದ್ದಿ :-   ಅಥಣಿ | ಶಾಲೆಯಲ್ಲಿ ಆಟವಾಡುವಾಗಲೇ ಹೃದಯಾಘಾತ ; ವಿದ್ಯಾರ್ಥಿನಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement