ಬೆಂಗಳೂರು: ಬಿಸಿಯೂಟ ಯೋಜನೆಯಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆ ಮಕ್ಕಳಿಗೆ ವಿತರಿಸುತ್ತಿದ್ದ ಚಿಕ್ಕಿ ವಿತರಣೆ ಸ್ಥಗಿತಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಚಿಕ್ಕಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾಗಿರುವ ಬಗ್ಗೆ ಮತ್ತು ವಿತರಣೆಯ ಸಮಸ್ಯೆಗಳ ಕುರಿತು ಧಾರವಾಡ ಮತ್ತು ಕಲಬುರಗಿಯಲ್ಲಿನ ಶಿಕ್ಷಣ ಇಲಾಖೆ ಅಪರ ಆಯುಕ್ತರು ಇಲಾಖೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಕ್ರಮ ಕೈಗೊಳ್ಳಲಾಗಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ರೂಪದಲ್ಲಿ ವಿತರಿಸಲಾಗುತ್ತಿರುವ ಚಿಕ್ಕಿಯಲ್ಲಿ ಅಪರ್ಯಾಪ್ತ ಕೊಬ್ಬಿನಾಂಶ (ಅನ್‌ಸ್ಯಾಚುರೇಟೆಡ್ ಫ್ಯಾಟ್) ಹೆಚ್ಚಿಗೆ ಇದ್ದು, ಇದರಲ್ಲಿ ಸಕ್ಕರೆ ಅಂಶ ಕೂಡ ಅಧಿಕವಾಗಿದೆ. ಚಿಕ್ಕಿಯನ್ನು ಸರಿಯಾಗಿ ಸಂಗ್ರಹಿಸದೇ ಇದ್ದಲ್ಲಿ ಕಲುಷಿತವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ವಿತರಣೆ ಸ್ಥಗಿತಗೊಳಿಸಲಾಗಿದೆ.
ಚಿಕ್ಕಿ ವಿತರಣೆ ಸ್ಥಗಿತಗೊಳಿಸಿ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಹಾಗೂ ಧಾರವಾಡ ಅಪರ ಆಯುಕ್ತರು ಕೋರಿದ್ದರು. ಇದೇ ರೀತಿಯ ಆಗ್ರಹ ಇನ್ನೂ ಕೆಲ ಜಿಲ್ಲೆಗಳಿಂದಲೂ ವ್ಯಕ್ತವಾಗಿತ್ತು ಈ ಹಿನ್ನೆಲೆಯಲ್ಲಿ ಸರ್ಕಾರ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಅನುದಾನಿತ ಮತ್ತು ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ವಾರದ ಆರು ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಚಿಕ್ಕಿ ಅಥವಾ ಬಾಳೆಹಣ್ಣು ನೀಡಲಾಗುತ್ತಿತ್ತು.
ಬಹುತೇಕ ಶಾಲೆಗಳಲ್ಲಿ ಚಿಕ್ಕಿಯ ಗಾತ್ರ ಒಂದೇ ತೆರನಾಗಿ ಇಲ್ಲದಿರುವುದು, ಅವಧಿ ಮೀರಿದ ಸಂಗ್ರಹ ಮತ್ತಿತರ ಕಾರಣಗಳಿಂದಲೂ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ, ಚಿಕ್ಕಿ ವಿತರಣೆ ಮಾಡಬಾರದು ಎಂದು ಇಲಾಖೆ ಸೂಚಿಸಿದೆ. ಈ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಇಲಾಖಾ ಆಯುಕ್ತರಿಗೆ ನಿರ್ದೇಶನ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ