ನವದೆಹಲಿ: ಇಂಡಿಯಾ’ಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ನೀಡಿದ ಅಶ್ಲೀಲ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಅಸ್ಸಾಂ ಹಾಗೂ ರಾಜಸ್ಥಾನದಲ್ಲಿ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ. ಆದರೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ರಣವೀರ್ ಅಲಹಾಬಾದಿಯಾ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಇಂತಹ ಕೀಳುಮಟ್ಟದ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ರಣವೀರ್ ಅವರ ಮನಸ್ಸಿನಲ್ಲಿದ್ದ ಕೊಳಕನ್ನು ಯೂಟ್ಯೂಬ್ ಶೋನಲ್ಲಿ ಹೊರಹಾಕಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.
ನೀವು ಬಳಸಿದ ಪದಗಳು ಹೆಣ್ಣುಮಕ್ಕಳು, ಸಹೋದರಿಯರು, ಪೋಷಕರು ಮತ್ತು ಸಮಾಜ ನಾಚಿಕೆ ಪಡುವಂತೆ ಮಾಡಿದೆ. ಇದು ವಿಕೃತ ಮನಸ್ಸನ್ನು ತೋರಿಸುತ್ತದೆ. ಇದು ಅಶ್ಲೀಲತೆಯಲ್ಲದಿದ್ದರೆ, ಮತ್ತೇನು? ನಾವು ನಿಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ಏಕೆ ರದ್ದುಗೊಳಿಸಬೇಕು ಅಥವಾ ಕ್ಲಬ್ ಮಾಡಬೇಕು?’ ಎಂದು ಪೀಠ ಪ್ರಶ್ನಿಸಿತು.
ನೀವು ಮತ್ತು ನಿಮ್ಮ ಬೆಂಬಲಿಗರು ಇಷ್ಟು ಅಧಃಪತನಕ್ಕೆ ಇಳಿದಿದ್ದೀರಿ. ಕಾನೂನು ಮತ್ತು ವ್ಯವಸ್ಥೆಯ ನಿಯಮ ಪಾಲಿಸಬೇಕು. ತನ್ನ ಹೆತ್ತವರಿಗೆ ನೋವು ಮಾಡಿರುವ ಬಗ್ಗೆ ಆತ ನಾಚಿಕೆಪಡಬೇಕು. ನಾವೇನು ದಂತ ಗೋಪುರಗಳಲ್ಲಿಲ್ಲ. ಆತ ಆಸ್ಟ್ರೇಲಿಯಾದ ಕಾರ್ಯಕ್ರಮವೊಂದನ್ನು ಹೇಗೆ ನಕಲು ಮಾಡಿ ಪ್ರದರ್ಶಿಸಿದ್ದಾನೆ ಎಂಬುದು ನಮಗೆ ತಿಳಿದಿದೆ. ಅಂತಹ ಕಾರ್ಯಕ್ರಮಗಳಲ್ಲಿ ಎಚ್ಚರಿಕೆ ನೀಡಲಾಗಿರುತ್ತದೆ” ಎಂದು ನ್ಯಾಯಾಲಯ ಅಲಾಹಾಬಾದಿಯಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ನ್ಯಾಯಾಲಯವು ಇಂತಹ ಮಾತನಾಡಿರುವವರದ್ದು ತುಂಬಾ ಕೊಳಕು ಹಾಗೂ ಕೆಟ್ಟ ಮನಸ್ಸು. ಇದು ಹೊಣೆಗೇಡಿತನದ ಪರಮಾವಧಿ ಇರಬೇಕು. ಇಂತಹ ಹೇಳಿಕೆ ಮೂಲಕ ಜನರನ್ನು, ಪೋಷಕರನ್ನು ಅವಮಾನಿಸುತ್ತಿದ್ದೀರಿ. ಅವು ವಿಕೃತ ಮನಸ್ಸಿನ ಮಾತುಗಳು ಎಂದು ಪೀಠ ಹೇಳಿತು.
ವಿವಿಧ ರಾಜ್ಯಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳನ್ನು ಒಗ್ಗೂಡಿಸಿ ಮಧ್ಯಂತರ ರಕ್ಷಣೆ ನೀಡುವಂತೆ ಕೋರಿ ಅಲಾಹಾಬಾದಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಪ್ರಸ್ತುತ ಅಲಾಹಾಬಾದಿಯಾ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ಮಾತ್ರವಿದ್ದು ಅದನ್ನು ಪ್ರತ್ಯೇಕವಾಗಿ ಸಮರ್ಥಿಸಿಕೊಳ್ಳಬಹುದು ಎಂದು ಹೇಳಿದ ನ್ಯಾಯಾಲಯ ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸಲು ನಿರಾಕರಿಸಿತು.
ಪೀಠವು ಮಧ್ಯಂತರ ರಕ್ಷಣೆ ನೀಡಿದರೂ ಎಲ್ಲಾ ಪ್ರಕರಣಗಳ ತನಿಖೆಗೆ ಸಹಕರಿಸಬೇಕು ಹಾಗೂ ಸದ್ಯಕ್ಕೆ ಯಾವುದೇ ಕಾರ್ಯಕ್ರಮ ನೀಡಬಾರದು ಎಂದು ಆದೇಶಿಸಿತು.
ರಣವೀರ್ ಪರ ವಕೀಲರಾದ ಅಭಿನವ ಚಂದ್ರಚೂಡ ಅವರು ಅಪೂರ್ವಾ ಅರೋರಾ ಪ್ರಕರಣದ ತೀರ್ಪನ್ನು ಪ್ರಸ್ತಾಪಿಸಿದಾಗ ನ್ಯಾಯಾಲಯ “ನಾವು ತೀರ್ಪನ್ನು ನೋಡಿದ್ದೇವೆ… ಹಾಗೆಂದ ಮಾತ್ರಕ್ಕೆ ನೀವು ಎಲ್ಲಾ ರೀತಿಯ ಅಸಭ್ಯ ನುಡಿಗಳನ್ನಾಡಲು ಪರವಾನಗಿ ಪಡೆದಿದ್ದೀರೋ. ನಿಮ್ಮ ಕೆಟ್ಟ ಮನಸ್ಸನ್ನು ಎಲ್ಲಿ ಮತ್ತು ಯಾವಾಗ ಬೇಕಾದರೂ ಪ್ರದರ್ಶಿಸಬಹುದೇ? ಗುಣಮಟ್ಟ ಎನ್ನುವುದು ಇದನ್ನೇ?” ಎಂದು ಕಿಡಿಕಾರಿತು.
ಅಲಹಾಬಾದಿಯ ಪರವಾಗಿ ವಾದ ಮಂಡಿಸಿದ ಅಭಿನವ ಚಂದ್ರಚೂಡ ಕೇವಲ ಹತ್ತು ಸೆಕೆಂಡ್‌ಗಳಷ್ಟು ಅವಧಿಯ ಹೇಳಿಕೆ ನೀಡಿರುವ ತನ್ನ ಕಕ್ಷಿದಾರನಿಗೆ ಜೀವ ಬೆದರಿಕೆ ಇದೆ. ಅವರ ನಾಲಿಗೆ ಕತ್ತರಿಸಿದರೆ ರೂ 5 ಲಕ್ಷ ಬಹುಮಾನ ನೀಡುವುದಾಗಿ ಹೇಳುತ್ತಿದ್ದಾರೆ ಎಂದರು.
ಆದರೆ ಇದಕ್ಕೆ ನ್ಯಾಯಾಲಯ ಅಲಾಹಾಬಾದಿಯಾ ಬಳಸಿರುವ ಭಾಷೆ ಮತ್ತು ನಡವಳಿಕೆಯನ್ನು ಪ್ರಶ್ನಿಸಿತು. ‘ಅರ್ಜಿದಾರ ಬಳಸಿದ ಭಾಷೆಯನ್ನು ಸಮರ್ಥಿಸಿಕೊಳ್ಳುತ್ತಿದ್ದೀರಾ’ ಎಂದು ನ್ಯಾ. ಕಾಂತ ಪ್ರಶ್ನಿಸಿದರು. ಆಗ ಅಭಿನವ ಅವರು “ನ್ಯಾಯಾಲಯದ ಅಧಿಕಾರಿಯಾಗಿ, ಬಳಸಿದ ಭಾಷೆಯ ಬಗ್ಗೆ ನನಗೆ ಅಸಹ್ಯವಿದೆ” ಎಂದು ಉತ್ತರಿಸಿದರು.
ಜೈಪುರ ಸೇರಿದಂತೆ ಅಲಹಾಬಾದಿಯಾ ವಿರುದ್ಧ ವಿವಿಧೆಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸದಂತೆ ತಡೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ ಅವರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸಬಾರದು. ಜೀವ ಬೆದರಿಕೆ ಇದ್ದಲ್ಲಿ ಮಹಾರಾಷ್ಟ್ರ ಮತ್ತು ಅಸ್ಸಾಂನ ಸ್ಥಳೀಯ ಪೊಲೀಸರ ನೆರವು ಪಡೆಯಲು ಅಲಹಾಬಾದಿಯಾ ಸ್ವತಂತ್ರ. ಪೊಲೀಸರಿಗೆ ಆತ ಪಾಸ್‌ಪೋರ್ಟ್ ಒಪ್ಪಿಸಬೇಕು. ಸುಪ್ರೀಂ ಕೋರ್ಟ್ ಅನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ. ಅವರು ಹಾಗೂ ಅವರ ಸಹಚರರು ಸದ್ಯಕ್ಕೆ ಬೇರಾವುದೇ ಪ್ರದರ್ಶನ ನೀಡುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ