ಕೊಟ್ಟಾಯಂ : ಶುಕ್ರವಾರ ಮುಂಜಾನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟುಮನೂರ್ ಬಳಿ ರೈಲ್ವೆ ಹಳಿಗಳ ಮೇಲೆ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು 42 ವರ್ಷ ವಯಸ್ಸಿನ ಶೈನಿ ಕುರಿಯಾಕೋಸ್ ಮತ್ತು ಅವರ ಪುತ್ರಿಯರಾದ 11 ವರ್ಷದ ಅಲೀನಾ ಮತ್ತು 10 ವರ್ಷದ ಇವಾನಾ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಕೇರಳದ ಥೆಲ್ಲಕೋಮ್ನ ಹೋಲಿ ಕ್ರಾಸ್ ಶಾಲೆಯ ವಿದ್ಯಾರ್ಥಿಗಳು.
ಕೇರಳದ ಎಟ್ಟುಮನೂರ್ ಮತ್ತು ಕೊಟ್ಟಾಯಂ ರೈಲು ನಿಲ್ದಾಣಗಳ ನಡುವೆ ಶುಕ್ರವಾರ ಮುಂಜಾನೆ 5:30 ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮೂವರು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಶವಗಳನ್ನು ಗುರುತಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಂತರ ಮರಣೋತ್ತರ ಪರೀಕ್ಷೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕಳೆದ ಒಂಬತ್ತು ತಿಂಗಳಿಂದ ಪತಿಯಿಂದ ಪ್ರತ್ಯೇಕವಾಗಿ ವಾಸವಾಗಿದ್ದ ಶೈನಿ, ಚರ್ಚ್ಗೆ ಹೋಗುವುದಾಗಿ ಹೇಳಿ ಹೆಣ್ಣು ಮಕ್ಕಳೊಂದಿಗೆ ಬೆಳಗ್ಗೆ ಮನೆಯಿಂದ ಹೊರಟಿದ್ದರು. ನಂತರ ಅವರ ಸಾವಿನ ಬಗ್ಗೆ ಕುಟುಂಬದವರಿಗೆ ತಿಳಿಸಲಾಯಿತು. ಶೈನಿಗೆ ಎರ್ನಾಕುಲಂ ಸ್ಪೋರ್ಟ್ಸ್ ಸ್ಕೂಲ್ನಲ್ಲಿ 9 ನೇ ತರಗತಿ ವಿದ್ಯಾರ್ಥಿಯಾಗಿರುವ ಎಡ್ವಿನ್ ಎಂಬ 14 ವರ್ಷದ ಮಗನಿದ್ದಾನೆ. ಪೊಲೀಸರು ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ