ಬೆಂಗಳೂರು: ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಮಲಮಗಳಾದ ನಟಿ ರನ್ಯಾ ರಾವ್ ಅವರ ಬಂಧನವಾಗಿರುವುದು ತಮಗೆ ಆಘಾತ ತಂದಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಪೊಲೀಸ್ ಮಹಾನಿರ್ದೇಶಕರಾದ (ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ) ಡಾ. ಕೆ ರಾಮಚಂದ್ರ ರಾವ್ ಹೇಳಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಪತ್ತೆ ಹಚ್ಚಿದ ನಂತರ ನಟಿ ರನ್ಯಾ ಅವರನ್ನು ಬಂಧಿಸಲಾಯಿತು.
ಸುದ್ದಿ ಸಂಸ್ಥೆ ಎಎನ್‌ಐ (ANI)ಯೊಂದಿಗೆ ಮಾತನಾಡಿದ ಡಾ. ಕೆ ರಾಮಚಂದ್ರ ರಾವ್ ಅವರು ಈ ವಿವಾದದಿಂದ ದೂರವಿರಲು ಪ್ರಯತ್ನಿಸಿದ್ದಾರೆ.” ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ನನ್ನ ವೃತ್ತಿಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ.” ಕಳ್ಳಸಾಗಾಣಿಕೆ ಚಟುವಟಿಕೆಗಳಲ್ಲಿ ರನ್ಯಾ ಭಾಗಿಯಾಗಿರುವ ಬಗ್ಗೆ ತನಗೆ ಏನೂ ತಿಳಿದಿರಲಿಲ್ಲ ಮತ್ತು ಮಾಧ್ಯಮ ವರದಿಗಳ ಮೂಲಕವೇ ಬಂಧನದ ಬಗ್ಗೆ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ಇದು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಾಗ ಇತರ ತಂದೆಯಂತೆ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಈ ವಿಷಯಗಳ ಬಗ್ಗೆ ನನಗೆ ತಿಳಿದಿರಲಿಲ್ಲ, ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ರನ್ಯಾ ಅವರ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟಪಡಿಸಿದ ರಾವ್, “ಅವರು ನಮ್ಮೊಂದಿಗೆ ವಾಸಿಸುತ್ತಿಲ್ಲ. ಅವರು ತಮ್ಮ ಪತಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. (ಬಹುಶಃ) ಕೆಲವು ಕೌಟುಂಬಿಕ ಸಮಸ್ಯೆಗಳಿಂದಾಗಿಅವರ ನಡುವೆ ಕೆಲವು ಸಮಸ್ಯೆಗಳಿರಬಹುದು …ಎಂದು ಹೇಳಿದರು.
ರನ್ಯಾ ರಾವ್ ಅವರ ಎರಡನೇ ಹೆಂಡತಿಯ ಮಗಳು. ಅವರ ಮೊದಲ ಹೆಂಡತಿ ತೀರಿಕೊಂಡ ನಂತರ, ರಾವ್ ಮರುಮದುವೆಯಾದರು, ಮತ್ತು ಅವರ ಎರಡನೇ ಹೆಂಡತಿಗೆ ರನ್ಯ ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ದುಬೈನಿಂದ ಭಾರತಕ್ಕೆ 14.8 ಕಿಲೋಗ್ರಾಂಗಳಷ್ಟು ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇರೆಗೆ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ.
ಆಕೆ ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿರುವ ಶಂಕೆಯ ಬಗ್ಗೆ ಸುಳಿವು ಪಡೆದಿದ್ದ ಡಿಆರ್‌ಐ ಅಧಿಕಾರಿಗಳು, ಆಕೆ ಆಗಮನಕ್ಕೂ ಮೊದಲು ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದರು. ಆಕೆಯ ವಿಮಾನ ಇಳಿದ ನಂತರ, ಆಕೆಯನ್ನು ಡಿಆರ್‌ಐ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿತು. ಮಾರ್ಚ್ 4 ರಂದು, ರನ್ಯಾ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ಅವರಿಗೆ ಮಾರ್ಚ್ 18 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ