ಬೆಂಗಳೂರು : ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಲು ಯೋಜಿಸುತ್ತಿದೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.
ರಾಜ್ಯಾದ್ಯಂತ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವಾಗ, ಆಡಳಿತಾರೂಢ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸರ್ಕಾರಿ ಟೆಂಡರ್‌ಗಳಲ್ಲಿ ಶೇಕಡಾ 4ರಷ್ಟು ಮೀಸಲಾತಿ ನೀಡುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಕಡೆಗಣಿಸಿ ಮುಸ್ಲಿಮರಿಗೆ ಮಾತ್ರ ಒಲವು ತೋರುವ ಮೂಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.”ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರನ್ನು ಕೇವಲ ಮುಸ್ಲಿಮರು ಎಂದು ಗ್ರಹಿಸುತ್ತದೆ, ಇತರ ನೈಜವಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ಇತರ ಅಲ್ಪಸಂಖ್ಯಾತ ಸಮುದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ದಶಕಗಳ ಹಿಂದೆ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು, ಆದರೆ ಇಂದು ಅವರು ಸುಸಂಘಟಿತರಾಗಿದ್ದಾರೆ ಮತ್ತು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ಮುಸ್ಲಿಮರು ಕಾಂಗ್ರೆಸ್‌ಗೆ ಮತಬ್ಯಾಂಕ್ ಆಗಿದ್ದು, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರತ್ಯೇಕವಾಗಿ ಮೀಸಲಾತಿ ನೀಡಲಾಗುತ್ತಿದೆ ಎಂದು ವಿಜಯೇಂದ್ರ ಹೇಳಿದರು. ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶಿತ ನಿಯಮದ ಮೂಲಕ ಈ ತುಷ್ಟೀಕರಣವನ್ನು ವಿಸ್ತರಿಸಲಾಗುತ್ತಿದೆ ಎಂದು ಆರೋಪಿಸಿದರು.
ಅತ್ಯಂತ ಹಿಂದುಳಿದ ವರ್ಗಗಳಿಗೆ ಕಾರ್ಯಕ್ರಮಗಳು, ನೀತಿಗಳು ಅಥವಾ ವಿಶೇಷ ಮೀಸಲಾತಿಗಳನ್ನು ನೀಡುವ ಬದಲು, ಮುಸ್ಲಿಮ್ ತುಷ್ಟೀಕರಣ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯಗಳ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರವು ಇದನ್ನು ತಕ್ಷಣವೇ ಹಿಂಪಡೆಯಬೇಕು. ಇದು ಸಮಾಜ ಮತ್ತು ರಾಜ್ಯವನ್ನು ಧಾರ್ಮಿಕ ರೀತಿಯಲ್ಲಿ ವಿಭಜಿಸುವ” ಕ್ರಮ ಎಂದು ಅವರು ಟೀಕಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ