ಬಿಬಿಎಂಪಿ ವಿಭಜಿಸುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ -2024 ವಿಧಾನಸಭೆಯಲ್ಲಿ ಅಂಗೀಕಾರ

ಬೆಂಗಳೂರು : ವಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ ಬಿಬಿಎಂಪಿಯನ್ನು ಏಳು ಪಾಲಿಕೆಗಳ ವರೆಗೆ ವಿಭಜಿಸುವ ಹಾಗೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸುವ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ’ (Greater Bengaluru Governance Bill 2024)ಯನ್ನು ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ಆಡಳಿತ ವೀಕೆಂದ್ರಿಕರಣ ದೃಷ್ಟಿಯಿಂದ ಹಾಗೂ ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಹಾಗೂ ಮೇಯರ್, ಉಪಮೇಯರ್‌ಗೆ 30 ತಿಂಗಳ ಅಧಿಕಾರದ ಅವಧಿಯನ್ನು ಈ ಮಸೂದೆ ಒದಗಿಸುತ್ತದೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.
ಈ ವೇಳೆ ಮಾತನಾಡಿದ ಶಿವಕುಮಾರ ಅವರು, “ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದ ಬೆಂಗಳೂರು ಮೂರು ಜಿಲ್ಲೆಯಾಯಿತು. ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ನಾಮನಿರ್ದೇಶಿತ ಸದಸ್ಯರು ಇರುವುದಿಲ್ಲ. ಕೇವಲ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಮಾತ್ರ ಮತದಾನ ಹಕ್ಕನ್ನು ಹೊಂದಿರುತ್ತಾರೆ” ಎಂದು ಅವರು ತಿಳಿಸಿದರು.

“ ಆಡಳಿತಾತ್ಮಕ ದೃಷ್ಟಿಯಿಂದಲೇ ಪಾಲಿಕೆ ವಿಭಜನೆ ಮಾಡಲಾಗುತ್ತಿದೆ. ಇದರಿಂದ ಅನುದಾನದ ಸಮಸ್ಯೆಯಾಗುತ್ತದೆ ಎಂದು ಕೆಲವು ಸದಸ್ಯರು ಪ್ರಸ್ತಾಪಿಸಿದ್ದಾರೆ. ನಾವು ಕೂಡ ಈ ವಿಚಾರವನ್ನು ಅವರುಗಳಂತೆಯೇ ಆಲೋಚನೆ ಮಾಡಿದ್ದೇವೆ. 75ನೇ ತಿದ್ದುಪಡಿ ಪ್ರಕಾರ ಸ್ಥಳೀಯ ಸಂಸ್ಥೆಗಳ ಹಣವನ್ನು ನಾವು ಬೇರೆಡೆಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಜತೆಗೆ ಎಲ್ಲವನ್ನು ಒಟ್ಟಿಗೆ ಸಂಗ್ರಹಿಸಿ ಹಂಚಿಕೆ ಮಾಡಲು ಆಗುವುದಿಲ್ಲ. ಹೀಗಾಗಿ ನಾವು ಸರ್ಕಾರದಿಂದ ಆರ್ಥಿಕವಾಗಿ ದುರ್ಬಲವಾಗಿರುವ ಪಾಲಿಕೆಗಳಿಗೆ ಸಹಾಯ ಮಾಡಬೇಕು ಎಂದು ಈ ಮಸೂದೆಯಲ್ಲಿ ಪ್ರಸ್ತಾಪಿಸಿದ್ದೇವೆ” ಎಂದು ತಿಳಿಸಿದರು.
7 ಪಾಲಿಕೆಗಳಾಗಿ ಬಿಬಿಎಂಪಿ ವಿಭಜನೆ
ವಿಧೇಯಕ ಮಂಡನೆ ಕುರಿತ ಪ್ರಸ್ತಾವನೆ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ ಅವರು, “ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ 74ನೇ ತಿದ್ದುಪಡಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರಿನ ಭವಿಷ್ಯದ ಹಿತದೃಷ್ಟಿಯಿಂದ ಈ ವಿಧೇಯಕ ಮಹತ್ವವಾದದ್ದು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಕಾರಣ ಓರ್ವ ಪಾಲಿಕೆ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳಿಂದ ನಿಭಾಯಿಸುವುದು ಕಷ್ಟ. ಹೀಗಾಗಿ ಈ ಮಸೂದೆಯಲ್ಲಿ 7 ಪಾಲಿಕೆ ರಚನೆಗೆ ಮುಂದಾಗಿದ್ದೇವೆ. ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಮಾಡಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಶಾಸಕರಿಗೆ ನಿಯಂತ್ರಣ ಇರಬೇಕು, ವಾರ್ಡ್ ಸಮಿತಿಗಳಾಗಬೇಕು, ಅಲ್ಲಿ ಜನಪ್ರತಿನಿಧಿಗಳು ಇರಬೇಕು. ಈ ಮಸೂದೆಯಲ್ಲಿ ಎಲ್ಲಾ ಶಾಸಕರು, ಸಂಸದರು ಕೂಡ ಸದಸ್ಯರಾಗಿರುತ್ತಾರೆ. ಮುಖ್ಯಮಂತ್ರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಉಪಾಧ್ಯಕ್ಷರಾಗಿರುತ್ತಾರೆ. ಪಾಲಿಕೆ ರಚನೆಯನ್ನು ನಾವು ಯಾವುದೇ ರೀತಿ ಬದಲವಾವಣೆ ಮಾಡುತ್ತಿಲ್ಲ” ಎಂದು ವಿವರಣೆ ನೀಡಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಗ್ರೇಟರ್ ಬೆಂಗಳೂರು ಅಥಾರಿಟಿ ನೀರು ಸರಬರಾಜು, ಬಿಎಂಟಿಸಿ, ಬಿಎಂಆರ್‌ಟಿಸಿ, ವಿಪತ್ತು ನಿರ್ವಹಣೆ, ಅಗ್ನಿಶಾಮಕದಳ, ಸಂಚಾರಿ ಪೊಲೀಸ್, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಸ್ಕಾಂ, ಬಿಎಂಎಲ್ ಟಿಎ, ಬಿಡಿಎ, ಪೊಲೀಸರು, ಸೇರಿದಂತೆ ಇತರೆ ವಿಭಾಗಗಳ ಆಯುಕ್ತರು, ಎಂ.ಡಿ ಹಾಗೂ ಸಿಇಓಗಳನ್ನು ಒಳಗೊಂಡಿದೆ. ಇಲ್ಲಿ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಹಾಗೂ ಜವಾಬ್ದಾರಿ ನೀಡಲಾಗಿದೆ” ಎಂದು ತಿಳಿಸಿದರು.
ಇದಕ್ಕಾಗಿ ತಜ್ಞರ ಆರು ಸಮಿತಿಗಳನ್ನು ನೇಮಿಸಲಾಗಿದೆ. ಮಸೂದೆಯಲ್ಲಿ 1ರಿಂದ 7ರ ವರೆಗೆ ಪಾಲಿಕೆ ಮಾಡಲು ಅವಕಾಶವಿದೆ, 7ಕ್ಕಿಂತ ಹೆಚ್ಚಿಗೆ ಮಾಡಲು ಅವಕಾಶವಿಲ್ಲ.ಇಷ್ಟರೊಳಗೆ ಎಷ್ಟನ್ನಾದರೂ ಮಾಡಬಹುದು. ಈ ವಿಚಾರದಲ್ಲಿ ಶಾಸಕರ ಅಭಿಪ್ರಾಯವನ್ನು ಪಡೆದು ನಂತರ ತೀರ್ಮಾನ ಮಾಡಲಾಗುವುದು. ಇಲ್ಲಿ ಪ್ರತಿ ಪಾಲಿಕೆಯ ಜನಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚಾಗಿರಬೇಕು. ಕನಿಷ್ಠ 300 ಕೋಟಿಯಷ್ಟು ಆದಾಯ ಸಂಗ್ರಹವಾಗಬೇಕು. ಕೃಷಿಯೇತರ ಉದ್ಯೋಗ ಶೇ.50 ಕ್ಕಿಂತ ಹೆಚ್ಚಾಗಿರಬೇಕು. ಈ ಪಾಲಿಕೆಗೆ ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಎಂದೇ ಹೆಸರಿಡಬೇಕು. ಯಾವುದೇ ಕಾರಣಕ್ಕೂ ಬೇರೆ ಹೆಸರು ಇಡುವಂತಿಲ್ಲ. ಆದಷ್ಟು ವಿಧಾನಸಭಾ ಕ್ಷೇತ್ರಗಳು ಇಬ್ಭಾಗ ಆಗದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ಮಾತ್ರ ಎರಡು ಪಾಲಿಕೆಗೆ ಮಾತ್ರ ವಿಭಾಗಿಸಬೇಕು. ಈ ಪಾಲಿಕೆ ಆಡಳಿತಾವಧಿ 5 ವರ್ಷ ನಿಗದಿ ಮಾಡಿದ್ದು, ಇಲ್ಲಿ ಪ್ರತಿ ಪಾಲಿಕೆಯಲ್ಲಿ 100ರಿಂದ 150 ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಮೇಯರ್, ಉಪಮೇಯರ್ ಅಧಿಕಾರವಧಿ ಎರಡೂವರೆ ವರ್ಷಗಳಿಗೆ ವಿಸ್ತರಿಸಲಾಗಿದೆ. ಮೇಯರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ ಆತ ಮೇಯರ್ ಆಗಿ ಆರು ತಿಂಗಳು ಕಳೆದಿರಬೇಕು” ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement