ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ ಜಾಮೀನು ಅರ್ಜಿ ವಜಾ

ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್‌ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ನಟಿ ರನ್ಯಾ ರಾವ್‌ ಜಾಮೀನು ಅರ್ಜಿಯ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಧೀಶರಾದ ವಿಶ್ವನಾಥ ಗೌಡರ ಶುಕ್ರವಾರ ಪ್ರಕಟಿಸಿದರು.
ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ ಜವಳಿ ಅವರು “ಕಸ್ಟಮ್ಸ್‌ ಕಾಯಿದೆಯ ಸೆಕ್ಷನ್‌ 102 ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅನುಪಾಲಿಸಿಲ್ಲ. ಬಂಧನ ಮೆಮೊವನ್ನು ನೀಡಲಾಗಿಲ್ಲ. ಆಕೆ ನಿದ್ರಿಸುವುದಕ್ಕೆ ಅವಕಾಶ ನೀಡದೇ ಆಕೆಯ ಹೇಳಿಕೆ ದಾಖಲಿಸಿಕೊಂಡಿರುವುದು ಸ್ವಯಂ ಹೇಳಿಕೆಯಾಗುವುದಿಲ್ಲ. ರಿಮ್ಯಾಂಡ್‌ ಅರ್ಜಿಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಷನ್‌ ತಿಳಿಸಿದೆ. ಆದರೆ, ಉಳಿದ ಇಬ್ಬರ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ” ಎಂದು ವಾದಿಸಿದರು.

ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಕೀಲ ಮಧು ಎನ್ ರಾವ್‌ ಅವರು “ಕಸ್ಟಮ್ಸ್‌ ಕಾಯಿದೆಗೆ ಅನುಗುಣವಾಗಿ ರನ್ಯಾರನ್ನು ಬಂಧಿಸಲಾಗಿದೆ. ಒಂದೊಮ್ಮೆ ಕಾಯಿದೆಯನ್ನು ಪಾಲಿಸದಿದ್ದರೂ ಮೇಲ್ನೋಟಕ್ಕೆ ಆರೋಪವಿದ್ದಾಗ ವಶಕ್ಕೆ ಪಡೆಯಲು ಅವಕಾಶವಿದೆ ಎಂದು ಕಾನೂನು ಹೇಳುತ್ತದೆ. ಚಿನ್ನ ಕಳ್ಳ ಸಾಗಣೆಯಲ್ಲಿ ದೊಡ್ಡ ಜಾಲವಿದ್ದು, ಅದನ್ನು ಪತ್ತೆ ಮಾಡಬೇಕಿದೆ. ಹೀಗಾಗಿ, ರನ್ಯಾ ರಾವ್‌ಗೆ ಜಾಮೀನು ನಿರಾಕರಿಸಬೇಕು” ಎಂದು ಮನವಿ ಮಾಡಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅದರಂತೆ ಕೋರ್ಟ್​ ರನ್ಯಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

ಮಾರ್ಚ್‌ 3ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಕಸ್ಟಮ್‌ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ರನ್ಯಾ ಚಿನ್ನವನ್ನು ಬೆಲ್ಟ್‌ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎಂದು ಆರೋಪಿಸಲಾಗಿತ್ತು. ರನ್ಯಾ ಮನೆಯಲ್ಲಿ ಶೋಧ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು ₹2.06 ಕೋಟಿ ಮೌಲ್ಯದ ಆಭರಣ ಮತ್ತು ₹2.67 ಕೋಟಿ ನಗದು ಜಪ್ತಿ ಮಾಡಿದ್ದರು. ಇದರಿಂದ ಪ್ರಕರಣದಲ್ಲಿ ಒಟ್ಟು ಜಫ್ತಿಯು ₹17.29 ಕೋಟಿಗೆ ಏರಿಕೆಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement