ಆಘಾತಕಾರಿ ಘಟನೆಯೊಂದರಲ್ಲಿ ಗಂಡ-ಹೆಂಡಿರ ಮಧ್ಯೆ ನಡೆದ ಜಗಳದಲ್ಲಿ ಪತ್ನಿ ತನ್ನ ಪತಿಯ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದ ಜಲಾವರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ 23 ವರ್ಷದ ರವಿನಾ ಸೈನ್ ಎಂಬ ಮಹಿಳೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
25 ವರ್ಷದ ಕನ್ಹಯ್ಯಲಾಲ್ ಸೈನ್ ಅವರು ರವಿನಾ ಅವರನ್ನು ಮದುವೆಯಾಗಿ 18 ತಿಂಗಳಾಗಿತ್ತು ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ಬ್ರಿಜ್ರಾಜ್ ಸಿಂಗ್ ಹೇಳಿದ್ದಾರೆ. ಅವರ ಮಧ್ಯೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗಿದೆ.
ಘಟನೆ ನಡೆದ ದಿನ ರಾತ್ರಿಯೂ ಅವರಿಬ್ಬರ ಮಧ್ಯೆ ಜಗಳ ನಡೆದು ಅದು ವಿಕೋಪಕ್ಕೆ ಹೋಯಿತು. ನಂತರ ರವಿನಾ ಕೋಪದ ಭರದಲ್ಲಿ ತನ್ನ ಪತಿಯ ನಾಲಿಗೆಯ ಒಂದು ಭಾಗವನ್ನು ಕಚ್ಚಿ ಹಡಿದು ತುಂಡರಿಸಿದ್ದಾರೆ. ತಕ್ಷಣವೇ ಕನ್ಹಯ್ಯಲಾಲ ಅವರನ್ನು ಕುಟುಂಬ ಸದಸ್ಯರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ನಂತರ
ಹೆಚ್ಚಿನ ಚಿಕಿತ್ಸೆಗಾಗಿ ಜಲಾವರ ಆಸ್ಪತ್ರೆಗೆ ಕರೆದೊಯ್ದರು. ಇದ್ದಿದ್ದರಲ್ಲಿ ಸಮಾಧಾನದ ಸಂಗತಿಯೆಂದರೆ ಕನ್ಹಯ್ಯಲಾಲ ಅವರ ತುಂಡಾದ ನಾಲಿಗೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಮರು ಜೋಡಿಸಬಹುದು ಎಂದು ವೈದ್ಯರು ಹೇಳಿದ್ದಾರಂತೆ.
ಘಟನೆಯ ನಂತರ, ರವಿನಾ ತನ್ನನ್ನು ಕೋಣೆಗೆ ಬೀಗ ಹಾಕಿಕೊಂಡು ತನ್ನ ಮಣಿಕಟ್ಟನ್ನು ಕುಡಗೋಲಿನಿಂದ ಸೀಳಿಕೊಂಡು ತನಗೆ ತಾನೇ ಹಾನಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ, ಆದರೆ, ಕುಟುಂಬ ಸದಸ್ಯರು ಸಕಾಲದಲ್ಲಿ ಮಧ್ಯ ಪ್ರವೇಶಿಸಿ ಇದನ್ನು ತಪ್ಪಿಸಿದ್ದಾರೆ ಎಂದು ಹೇಳಲಾಗಿದೆ. ಕನ್ಹಯಾಲಾಲ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ