ಚಿಕ್ಕಮಗಳೂರು| ಪತ್ನಿ ಬಿಟ್ಟು ಹೋದ ಕೋಪಕ್ಕೆ ಗುಂಡು ಹಾರಿಸಿ ಕುಟುಂಬದ ಮೂವರ ಹತ್ಯೆ; ನಂತರ ತಾನೂ ಆತ್ಮಹತ್ಯೆ..

ಚಿಕ್ಕಮಗಳೂರು: ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ ಮನನೊಂದು ಅತ್ತೆ, ನಾದಿನಿ ಹಾಗೂ 7 ವರ್ಷದ ಮಗುವನ್ನು ಗುಂಡುಹಾರಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಖಾಂಡ್ಯ ಬಳಿ ನಡೆದಿದೆ ಎಂದು ವರದಿಯಾಗಿದೆ.
ರತ್ನಾಕರ ಎಂಬಾತ ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗು ಮೌಲ್ಯಳನ್ನು ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ನಂತರ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಸೆಲ್ಫಿ ವೀಡಿಯೊ ಮಾಡಿ ಸಂಸಾರದ ನೋವು ಹೇಳಿಕೊಂಡು ಮೂವರನ್ನು ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ನಾದಿನಿಯ ಗಂಡನ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ರತ್ನಾಕರ ಬಾಳೆಹೊನ್ನೂರು ಖಾಂಡ್ಯ ಸಮೀಪದ ಖಾಸಗಿ ಶಾಲೆ ಬಸ್ ಚಾಲಕನಾಗಿದ್ದು, ಈತನ ಪತ್ನಿ ಬಿಟ್ಟು ಹೋಗಿದ್ದಾಳೆ. ಇದರಿಂದ ಕೋಗೊಂಡಿದ್ದ ಈತ ಮಂಗಳವಾರ ರಾತ್ರಿ ಕೃತ್ಯ ಎಸಗಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಹಾಗೂ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು ; ನಾಲ್ವರ ರಕ್ಷಣೆ

ಸೆಲ್ಫಿಯಲ್ಲಿ ನೋವು ತೋಡಿಕೊಂಡ ರತ್ನಾಕರ
ಕೃತ್ಯ ಎಸಗುವ ಮುಂಚೇ ಸೆಲ್ಫಿ ವೀಡಿಯೊ ಮಾಡಿದ್ದ ಈತ, ನನ್ನ ಮಗಳ ಖುಷಿ, ಪ್ರೀತಿ, ಸಂತೋಷದ ಮುಂದೇ ಏನೂ ಇಲ್ಲ. ಮಗಳಿಗೆ ಶಾಲೆಯಲ್ಲಿ ಮಕ್ಕಳು ನಿಮ್ಮ ಅಮ್ಮ ಎಲ್ಲಿ ಎಂದು ಕೇಳ್ತಾರೆ. ಮನೆಗೆ ಬಂದ ಮಗಳು ನನ್ನನ್ನು ಕೇಳುತ್ತಾಳೆ.
ನನಗೆ ಗೊತ್ತಿಲ್ಲದೆ ಮಗಳು ಆಲ್ಬಂನಿಂದ ಫೋಟೋ ತಗೆದುಕೊಂಡು ಹೋಗಿ ಶಾಲೆಯಲ್ಲಿ ತೋರಿಸುತ್ತಾಳೆ. ಮಗಳು ತುಂಬಾ ಬೇಜಾರಾಗಿದ್ಲು, ಎಲ್ಲರೂ ನಿಮ್ಮ ಅಮ್ಮ ಎಲ್ಲಿ ಎಂದು ಕೇಳ್ತಾರೆ. ನನ್ನ ನಿರ್ಧಾರವನ್ನು ನನ್ನ ಕುಟುಂಬದವರಿಗೆ ಹೇಳಿದ್ದೇನೆ. ನನ್ನ ಮನೆಯವರು ನನಗೆ ಮೋಸ ಮಾಡಿ ಹೋಗಿ ಎರಡು ವರ್ಷ ಆಯ್ತು. ಪಾಪು ಸಹ ಬೇಡ ಎಂದು ಬಿಟ್ಟು ಹೋಗಿದ್ದಾಳೆ. ನಾನೇ ನೋಡಿಕೊಳ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಮೂರು ಜೀವಗಳನ್ನು ಸಾಯಿಸಿದ ರತ್ನಾಕರ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಎಲ್ಲೆಂದರಲ್ಲಿ ಮೃತದೇಹಗಳು ಬಿದ್ದಿದ್ದು, ಮನೆಯ ತುಂಬೆಲ್ಲ ರಕ್ತದ ಕೋಡಿ ಹರಿದಿದೆ. ಎಂಥವರ ಮನಸ್ಸು ಕಲಕುವಂತಿದೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಜನರು ಜಮಾಯಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement