ಬೆಂಗಳೂರು: ತಮ್ಮ ಮನೆಯೊಳಗೆ ನುಗ್ಗಿದ ಚಿರತೆಯನ್ನು ದಂಪತಿ ಮನೆಯೊಳಗೆ ಕೂಡಿ ಹಾಕಿದ ನಂತರ ತಕ್ಷಣವೇ ಕಟ್ಟಡದಿಂದ ಹೊರಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೊಂಡೊಯ್ಯಲಾಯಿತು.
ಬೆಂಗಲೂರು ನಗರದ ಹೊರವಲಯದ ಜಿಗಣಿಯಲ್ಲಿರುವ ಕುಂಟ್ಲು ರೆಡ್ಡಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.
ಮಂಜುನಾಥ ಎಂಬುವರಿಗೆ ಸೇರಿದ ಕಟ್ಟಡದ ಸುತ್ತಲೂ ಚಿರತೆ ರಾತ್ರಿಯಿಡೀ ಸಂಚರಿಸುತ್ತಿತ್ತು. ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬಾಡಿಗೆದಾರ ವೆಂಕಟೇಶ ಮನೆಯೊಳಗೆ ಚಿರತೆ ನುಸುಳಿದೆ. ಈ ವೇಳೆ ಪತ್ನಿ ವೆಂಕಟಲಕ್ಷ್ಮಿ ಮನೆಯಲ್ಲಿದ್ದರು. ಅವರ ಮಗ ನಿಖಿಲ ಇರಲಿಲ್ಲ.
ದಂಪತಿ ಹೇಗೋ ಮನೆಯಿಂದ ಹೊರಬಂದು ಚಿರತೆ ಒಳಗಿದ್ದಾಗಲೇ ಬಾಗಿಲಗೆ ಬೀಗ ಹಾಕಿದರು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ, ದೊಡ್ಡ ಜನಸಮೂಹವು ಮನೆಯ ಸುತ್ತಲೂ ಸೇರಿತು ಮತ್ತು ಸುಮುತ್ತಲಿನ ಮನೆಗಳ ಮೇಲ್ಛಾವಣಿಯ ಮೇಲೆ ಜಮಾಯಿಸಿತು.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಮನೆ ಬಾಗಿಲಿಗೆ ಪಂಜರ ಇಟ್ಟು ಸುತ್ತ ಬಲೆ ಬೀಸಿದ್ದಾರೆ. ಆದರೆ, ಚಿರತೆ ಮಂಚದ ಕೆಳಗೆ ನುಸುಳಿದ್ದು, ಕೆಲ ಹೊತ್ತು ಯಾರಿಗೂ ಕಾಣಿಸಲಿಲ್ಲ. ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪಶುವೈದ್ಯ ಡಾ.ಕಿರಣ ಮತ್ತು ತಂಡ ಆಗಮಿಸಿದ ನಂತರ ಅರಣ್ಯ ಸಿಬ್ಬಂದಿ ಮತ್ತೊಂದು ಪಂಜರವನ್ನು ಮಂಚದ ಬಳಿಯೇ ಇಟ್ಟರು. ಅಂತಿಮವಾಗಿ, ಐದು ಗಂಟೆಗಳ ನಂತರ, ಮಂಚದ ಕೆಳಗೆ ಅಡಗಿದ್ದ ಚಿರತೆಯನ್ನು ಶಾಂತಗೊಳಿಸಿ ಬೋನಿಗೆ ಬೀಳಿಸಿದರು. ನಂತರ ಅದನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೊಂಡೊಯ್ಯಲಾಯಿತು. ಬೆಳಗ್ಗೆ ಶಾಲಾ ಮಕ್ಕಳು ಬೀದಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಕ್ಕಳ ಪಕ್ಕದಲ್ಲೇ ಚಿರತೆ ತೆರಳಿದೆ. ಆದರೆ, ಯಾರಿಗೂ ಉಪಟಳ ನೀಡದೆ ನಡೆದು ಹೋಗಿರುವುದಾಗಿ ಸಾರ್ವಜನಿಕರು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ ಮಾತನಾಡಿ, ‘ಮಾಹಿತಿ ಸಿಕ್ಕ ತಕ್ಷಣ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದೆವು. ಚಿರತೆ ಸುಮಾರು 1.5 ಕಿ.ಮೀ ದೂರದ ಜನ ವಾಸಕ್ಕೆ ನುಗ್ಗಿದ್ದು, ಜನ ಇರುವಾಗಲೇ ಮನೆಯಲ್ಲಿ ಅಡಗಿಕೊಂಡಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.
ಇದಲ್ಲದೆ, “ನಾವು ಮೊಬೈಲ್ ಕ್ಯಾಮೆರಾಗಳ ಸಹಾಯದಿಂದ ನಾವು ಚಿಕ್ಕ ಕೋಣೆಯಲ್ಲಿ ಚಿರತೆಯನ್ನು ಪತ್ತೆಹಚ್ಚಿದೆವು ಮತ್ತು ಪಶುವೈದ್ಯರು ಎರಡು ಡಾರ್ಟ್‌ಗಳಿಂದ ಅದನ್ನು ಶಮನಗೊಳಿಸಿದರು. ಇದು ಹೆಣ್ಣು ಚಿರತೆಯಾಗಿದ್ದು, ಸುಮಾರು 6-7 ವರ್ಷಗಳಾಗಿರಬಹುದು ಮತ್ತು ಅದರ ಆರೋಗ್ಯವನ್ನು ಪರಿಶೀಲಿಸಲಾಗುವುದು” ಎಂದು ಅವರು ಹೇಳಿದರು.
ಬಾಗಿಲಲ್ಲಿ ಪ್ಲೈವುಡ್ ಶೀಟ್ ಇಡಲಾಗಿತ್ತು, ಚಿರತೆ ಅದನ್ನು ಕೆಡವಿ ಮನೆಯೊಳಗೆ ನುಗ್ಗಿದೆ, ನನ್ನ ಹೆಂಡತಿ ನೆಲದ ಮೇಲೆ ಕುಳಿತು ಹಾಲು ಕುಡಿಯುತ್ತಿದ್ದಳು, ನಾನು ಟಿವಿ ನೋಡುತ್ತಿದ್ದೆ, ಕೋಣೆಗೆ ಪ್ರವೇಶಿಸಿದ ತಕ್ಷಣ ಮನೆಗೆ ಬೀಗ ಹಾಕಿ ಹೊರಬಂದೆವು ಎಂದು ವೆಂಕಟೇಶ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ