4 ತಿಂಗಳಲ್ಲಿ 49 ಕೆಜಿ ಕಳ್ಳ ಸಾಗಾಣೆ ಮಾಡಿದ್ದ ನಟಿ ರನ್ಯಾ ರಾವ್‌ ; 38 ಕೋಟಿ ರೂ. ಹವಾಲಾ ವರ್ಗಾವಣೆಗೆ ಸಹ ಆರೋಪಿಗಳ ಸಹಾಯ…

ಬೆಂಗಳೂರು: ದುಬೈಯಿಂದ ಚಿನ್ನ ಅಕ್ರಮ ಕಳ್ಳ ಸಾಗಣೆ (Gold Smuggling Case) ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಕನ್ನಡ ನಟಿ ರನ್ಯಾ ರಾವ್ (Ranya Rao) ಕುರಿತಾದ ಮತ್ತಷ್ಟು ಸಂಗತಿಗಳು ಹೊರಬಿದ್ದಿವೆ.
ಈ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ ಎಂಬಾತ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತನಿಖಾಧಿಕಾರಿಗಳ ಮುಂದೆ ಅನೇಕ ಸಂಗತಿ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ನಾಲ್ಕು ತಿಂಗಳಲ್ಲಿ ರನ್ಯಾ ಬರೋಬ್ಬರಿ 49.6 ಕೆಜಿ ಚಿನ್ನ ಸಾಗಿಸಿದ್ದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಈ ಚಿನ್ನವನ್ನೆಲ್ಲ ತಂದು ಸಾಹಿಲ್ ಜೈನ್​ಗೆ ಕೊಟ್ಟಿದ್ದ ರನ್ಯಾ, ಅದನ್ನ ಆತನ ಮೂಲಕವೇ ಮಾರಾಟ ಮಾಡಿಸಿದ್ದಳಂತೆ. ಅಷ್ಟೇ ಅಲ್ಲ ಚಿನ್ನ ತರಲು 38.39 ಕೋಟಿ ರೂ.ಗಳಷ್ಟು ಹವಾಲ ಮೂಲಕ ದುಬೈಗೆ ಸಾಗಾಟ ಮಾಡಿದ್ದಳು ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕಳೆದ ನವೆಂಬರ್‌ನಿಂದ ಬರೋಬ್ಬರಿ 49.6 ಕೆಜಿ ಚಿನ್ನ ತಂದು ರನ್ಯಾ ಕೊಟ್ಟಿರುವುದಾಗಿ ಸಾಹಿಲ್‌ ಜೈನ್‌ ಒಪ್ಪಿಕೊಂಡಿದ್ದಾನೆ. ಹಾಗೂ ರನ್ಯಾ ತಂದುಕೊಟ್ಟಿದ್ದ 49.6 ಕೆಜಿ ಚಿನ್ನವನ್ನು ಮಾರಾಟ ಮಾಡಿದ್ದಾಗಿ ಸಾಹಿಲ್ ಜೈನ್ ತಿಳಿಸಿದ್ದಾನೆ.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಪ್ರತಿ ಬಾರಿ ದುಬೈನಿಂದ ಬೆಂಗಳೂರಿಗೆ ಚಿನ್ನತಂದು ಮಾರಾಟ ಮಾಡಿದ ಬಳಿಕ ಅದರಿಂದ ಬಂದ ಹಣದಿಂದಲೇ ಮತ್ತೆ ಚಿನ್ನ ಖರೀದಿಗೆ ಹೋಗುತ್ತಿದ್ದಳು ಎಂದು ಮಾಹಿತಿ ನೀಡಿದ್ದಾನೆ. 38.39 ಕೋಟಿ ರೂ. ಹವಾಲಾ ಹಣವನ್ನು ದುಬೈಗೆ ಹಾಗೂ ಬೆಂಗಳೂರಿನಲ್ಲಿ ಆಕೆಗೆ ಹವಾಲಾ ರೂಪದಲ್ಲಿ 1.73 ಕೋಟಿ ರೂ.ಗಳನ್ನು ವರ್ಗಾಯಿಸಲು ಸಹಾಯ ಮಾಡಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಪ್ರತಿ ಹವಾಲ ವರ್ಗಾವಣೆಗೆ ಸಾಹಿಲ್‌ಗೆ 55 ಸಾವಿರ ರೂ. ಕಮಿಷನ್‌ ಸಿಗುತ್ತಿತ್ತು ಎಂದು ಡಿಆರ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದುವರೆಗೆ ಅಧಿಕಾರಿಗಳು 14.206 ಕೆಜಿ ಚಿನ್ನ, 2,67,00,000 ರೂ. ನಗದು ಮತ್ತು 2 ಕೆಜಿ ಚಿನ್ನದ ಆಭರಣ ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 4 ರಂದು ರನ್ಯಾ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾದ 2.67 ಕೋಟಿ ರೂಪಾಯಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಹಣ ದುಬೈನಲ್ಲಿ ಚಿನ್ನ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಿದ ಲಾಭದ ಹವಾಲಾ ಹಣ ಎಂದು ಶಂಕಿಸಲಾಗಿದೆ ಎಂದು ಡಿಆರ್‌ಐ ಹೇಳಿದೆ. ಎರಡು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ನಿಂದ ಹೊರತೆಗೆಯಲಾದ ಪುರಾವೆಗಳ ಆಧಾರದ ಮೇಲೆ ಜೈನ್ ನನ್ನು ಮತ್ತಷ್ಟು ಪ್ರಶ್ನೆ ಮಾಡಬಹುದು ಎಂದು ಸಂಸ್ಥೆ ಹೇಳಿದೆ.
ಮಾ. 3ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಡಿಆರ್​ಐ ಅಧಿಕಾರಿಗಳ ಬಲೆಗೆ ಬಿದ್ದಿದ್ದಳು. ಈ ವೇಳೆ ಆಕೆಯ ಬಳಿ 14 ಕೆಜಿ ಚಿನ್ನ ಪತ್ತೆಯಾಗಿತ್ತು. ನಟಿ ರನ್ಯಾ ರಾವ್, ಸರ್ಕಾರದ ಉನ್ನತ ಅಧಿಕಾರಿಗಳಿಗೆ ನೀಡಲಾಗುವ ಸವಲತ್ತುಗಳನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಂಶ ತನಿಖೆಯಲ್ಲಿ ಬಹಿರಂಗವಾಗಿತ್ತು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement