ವಿವಾದಾತ್ಮಕ ಇಫ್ತಾರ್ ಕೂಟ ; ತಮಿಳು ಸೂಪರ್‌ ಸ್ಟಾರ್‌ ದಳಪತಿ ವಿಜಯ ವಿರುದ್ಧ ಮೌಲಾನಾ ಶಹಾಬುದ್ದೀನ್ ರಜ್ವಿ ಫತ್ವಾ

ನವದೆಹಲಿ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಮತ್ತು ಖ್ಯಾತ ತಮಿಳು ನಟ ವಿಜಯ ದಳಪತಿ ಅವರು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಮದ್ಯವ್ಯಸನಿಗಳು ಮತ್ತು ಜೂಜುಕೋರರು ಸೇರಿದಂತೆ ಸಮಾಜ ವಿರೋಧಿ ಅಂಶಗಳನ್ನು ಆಹ್ವಾನಿಸಿದ್ದಾರೆ ಎಂಬ ಆರೋಪದ ಮೇಲೆ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ.
ಉತ್ತರ ಪ್ರದೇಶದ ಬರೇಲಿಯ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಅವರು ನಟ ವಿಜಯ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮೌಲಾನಾ, ವಿಜಯ ಅವರು ಚಲನಚಿತ್ರೋದ್ಯಮದಲ್ಲಿದ್ದಾಗ ಮುಸ್ಲಿಮರನ್ನು “ಭಯೋತ್ಪಾದಕರು” ಎಂಬ ರೀತಿಯಲ್ಲಿ ಚಿತ್ರಿಸಿದ್ದಾರೆ. ಈಗ ರಾಜಕೀಯ ವೃತ್ತಿಜೀವನ ಆರಂಭಿಸಲು ಸಮುದಾಯದ ನಡುವೆ ಹೆಜ್ಜೆ ಹಾಕಲು ಬಯಸುತ್ತಾರೆ ಎಂದು ಹೇಳಿದ್ದಾರೆ.

“ಸಿನಿಮಾ ಉದ್ಯಮದಲ್ಲಿದ್ದಾಗ, ಅವರು ತಮ್ಮ ಹಲವಾರು ಚಿತ್ರಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದಕರಂತೆ ಚಿತ್ರಿಸಿದ್ದಾರೆ, ಮುಸ್ಲಿಮರನ್ನು ವಿವಿಧ ರೀತಿಯಲ್ಲಿ ಕೆಣಕಲು ಪ್ರಯತ್ನಿಸಿದ್ದಾರೆ. ಈಗ, ಅವರು ರಾಜಕೀಯದಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ಮುಸ್ಲಿಂ ಸಮುದಾಯಕ್ಕೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಅವರು ಇತ್ತೀಚೆಗೆ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು ಮತ್ತು ಜೂಜುಕೋರರು, ಮದ್ಯವ್ಯಸನಿಗಳು ಮತ್ತು ಇತರ ಸಮಾಜವಿರೋಧಿ ಶಕ್ತಿಗಳನ್ನು ಅದಕ್ಕೆ ಆಹ್ವಾನಿಸಿದ್ದರು, ಇದು ತಮಿಳುನಾಡಿನ ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ” ಎಂದು ಅವರು ಹೇಳಿದ್ದಾರೆ.

ವಿಜಯ ವಿರುದ್ಧ ಹೊರಡಿಸಲಾದ ಫತ್ವಾದ ಹಾರ್ಡ್ ಪ್ರತಿಯನ್ನು ಪ್ರದರ್ಶಿಸಿದ ಮೌಲಾನಾ ರಜ್ವಿ, ತಮಿಳುನಾಡಿನ ಮುಸ್ಲಿಮರಿಗೆ ನಟ ವಿಜಯ ಅವರ ಕೈಕುಲುಕಬೇಡಿ ಮತ್ತು ಅವರನ್ನು ನಂಬಬೇಡಿ ಎಂದು ಸಲಹೆ ನೀಡಿದ್ದಾರೆ.
“ತಮಿಳುನಾಡಿನ ಮುಸ್ಲಿಮರು ನಟ ವಿಜಯ ಅವರೊಂದಿಗೆ ಕೈಕುಲುಕಬಾರದು, ಭೇಟಿಯಾಗಬಾರದು ಅಥವಾ ಸಹಾನುಭೂತಿ ಹೊಂದಬಾರದು ಎಂದು ನಾನು ಒತ್ತಾಯಿಸುತ್ತೇನೆ. ತಮಿಳುನಾಡಿನ ಮುಸ್ಲಿಮರು ತಮ್ಮ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು ಮತ್ತು ನಟ ವಿಜಯ ಅವರನ್ನು ನಂಬಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಬೇಕು” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement