ಬೆಂಗಳೂರು: ಬೀದರ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ (CET 2025) ಬರೆಯಲು ಹೋದ ಇಬ್ಬರು ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿರುವ ಅಧಿಕಾರಿಗಳ ಕ್ರಮದ ವಿರುದ್ಧ ಬ್ರಾಹ್ಮಣ ಸಮುದಾಯದಿಂದ ವ್ಯಾಪಕ ಆಕ್ರೋಶವಾದ ಬೆನ್ನಲ್ಲೇ ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಕೆಇಎ (KEA)ಅಂತಹ ಯಾವುದೇ ಮಾರ್ಗಸೂಚಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಕೆಲ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಇಟಿ ಪರೀಕ್ಷೆ ವೇಳೆ ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯಬೇಕು ಎಂದು ಹೇಳಿದ್ದು ತಪ್ಪು,
ಸಿಇಟಿ ಪರೀಕ್ಷಾ ವೇಳೆ ಕೆಲವು ನಿಯಮ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಬಗ್ಗೆ ಸೂಚನೆ ನೀಡಲಾಗಿದೆ, ಅದನ್ನು ಪಾಲಿಸಬೇಕು. ಆದರೆ ಜನಿವಾರ ತೆಗೆಯಬೇಕೆಂಬ ನಿಯಮ ಇಲ್ಲ ಎಂದು ಹೇಳಿದ್ದಾರೆ. ಈಗ ತಪ್ಪು ಆಗಿದೆ. ಇಂತಹ ತಪ್ಪು ಮುಂದೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾರೂ ಇಂತಹ ಕೆಲಸ ಮಾಡಿದ್ದಾರೆಯೋ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಗುರುವಾರ ನಡೆದ ಸಿಇಟಿ ಪರೀಕ್ಷೆಯಲ್ಲಿ ಬೀದರಿನಲ್ಲಿ ಸುಚಿವೃತ ಕುಲಕರ್ಣಿ ಎನ್ನುವ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ವೇಳೆ ಜನಿವಾರ ತೆಗೆಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೂ ಇಂಥದ್ದೇ ಘಟನೆ ನಡೆದಿದೆ. ಇದಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯ ಮುನ್ನ ಏನು ನಿಯಮ ಇರುತ್ತದೋ ಅವೆಲ್ಲ ನಿಯಮಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಜನಿವಾರ ತೆಗೆಯಬೇಕು, ಲಿಂಗದಕಾಯಿ ತೆಗೆಯಬೇಕು ಎಂಬ ನಿಯಮ ಎಲ್ಲಿಯೂ ಇಲ್ಲ. ಹಾಗಾಗಿ ಈ ಎರಡು ಘಟನೆಗಳ ಕುರಿತು ಈಗಾಗಲೇ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಪ್ರಸನ್ನ ಅವರು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ