ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಮಾಜಿ ಅಧ್ಯಕ್ಷ ದಿಲೀಪ ಘೋಷ್ ಅವರು ಪಕ್ಷದ ಸಹೋದ್ಯೋಗಿ ರಿಂಕು ಮಜುಂದಾರ್ ಅವರನ್ನು ಶುಕ್ರವಾರ ವಿವಾಹವಾದರು.
ಸಾಂಪ್ರದಾಯಿಕ ಬಂಗಾಳಿ ವಿವಾಹ ಉಡುಪನ್ನು ಧರಿಸಿ ತಲೆಯ ಮೇಲೆ ‘ಟೋಪೋರ್’ ಧರಿಸಿ, ದಿಲೀಪ್ ಘೋಷ್ ಅವರು ವಿವಾಹದ ವಿಧಿವಿಧಾನಗಳನ್ನು ಪೂರೈಸಿದರು. “ಎಲ್ಲರ ಶುಭ ಹಾರೈಕೆಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನನಗೆ ಶುಭ ಹಾರೈಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ನನ್ನ ವೈಯಕ್ತಿಕ ಜೀವನವು ನನ್ನ ರಾಜಕೀಯ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಅವರು ಕೋಲ್ಕತ್ತಾ ಬಳಿಯ ನ್ಯೂ ಟೌನ್ನಲ್ಲಿರುವ ತಮ್ಮ ನಿವಾಸದ ಹೊರಗೆ ಕಾಯುತ್ತಿದ್ದ ವರದಿಗಾರರಿಗೆ ತಿಳಿಸಿದರು. 60 ವರ್ಷದ ದಿಲೀಪ ಘೋಷ್ ಅವರು ತಮ್ಮ ತಾಯಿಯ ಆಸೆಯನ್ನು ಈಡೇರಿಸಲು ಮದುವೆಯಾಗಲು ನಿರ್ಧರಿಸಿದ್ದಾಗಿ ಹೇಳಿದರು.
ಅವರು ಈವರೆಗೆ ಅವಿವಾಹಿತರಾಗಿ ಉಳಿದಿದ್ದರು. ಈಗ ತಮ್ಮ 60ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ಆದರೆ ಇದು ರಿಂಕು ಮಜುಂದಾರ್ ಅವರ ಎರಡನೇ ವಿವಾಹವಾಗಿದ್ದು, ಅವರಿಗೆ ಮೊದಲಿನ ಮದುವೆಯಿಂದ ಮಗನಿದ್ದಾನೆ.
ದಿಲೀಪ್ ಘೋಷ್ ತಮ್ಮ ಯೌವನದಿಂದಲೂ ಆರ್ಎಸ್ಎಸ್ ಸದಸ್ಯರಾಗಿದ್ದಾರೆ ಮತ್ತು 2015 ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗುವ ಮೊದಲು ದೇಶಾದ್ಯಂತ ವಿವಿಧ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷರಾಗಿ, ಎಡಪಂಥೀಯರನ್ನು ಬದಲಿಸಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಪ್ರಮುಖ ವಿರೋಧ ಪಕ್ಷವಾಗಿ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇವರಿಬ್ಬರು 2021 ರಲ್ಲಿ ಇಕೋ ಪಾರ್ಕ್ನಲ್ಲಿ ಬೆಳಗಿನ ವಾಕಿಂಗ್ ಸಮಯದಲ್ಲಿ ಭೇಟಿಯಾದರು ಮತ್ತು ಕಾಲಾನಂತರದಲ್ಲಿ ಸ್ನೇಹ ಬೆಳೆಯಿತು ಎಂದು ಅವರ ಆಪ್ತರು ಹೇಳಿದರು.
ಮದುವೆಯ ಪ್ರಸ್ತಾಪವು ರಿಂಕು ಮಜುಂದಾರ ಕಡೆಯಿಂದ ಬಂದಿತ್ತು.”ಆರಂಭದಲ್ಲಿ ಅವರು ಆಸಕ್ತಿ ಹೊಂದಿರಲಿಲ್ಲವಾದರೂ, ಅವರು ನನ್ನ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ” ಎಂದು 51 ವರ್ಷದ ರಿಂಕು ಮಜುಂದಾರ್ ಹೇಳಿದರು.
.
ನಿಮ್ಮ ಕಾಮೆಂಟ್ ಬರೆಯಿರಿ