ಪೋಪ್‌ ಫ್ರಾನ್ಸಿಸ್‌ ನಿಧನಕ್ಕೆ ಭಾರತದಲ್ಲಿ ಮೂರು ದಿನ ಶೋಕಾಚರಣೆ

ನವದೆಹಲಿ: ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಕೇಂದ್ರ ಸರ್ಕಾರ ಸೋಮವಾರ ಮೂರು ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಿದೆ. ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ) ಶೋಕಾಚರಣೆ ಇರಲಿದೆ. ನಂತರ ಪೋಪ್‌ ಅಂತ್ಯಕ್ರಿಯೆ ನಡೆಯಲಿರುವ ದಿನದಂದು ಒಂದು ದಿನದ ಶೋಕಾಚರಣೆ ಇರಲಿದೆ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.
ಸುಮಾರು 1,300 ವರ್ಷಗಳಲ್ಲಿ ಮೊದಲ ಯುರೋಪಿಯನೇತರ ಪೋಪ್ ಆಗಿದ್ದ ಫ್ರಾನ್ಸಿಸ್ (Pope Francis) ಸೋಮವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅರ್ಜೆಂಟೀನಾದಲ್ಲಿ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ ಎಂದು ಜನಿಸಿದ ಫ್ರಾನ್ಸಿಸ್, ಅಮೆರಿಕ ಮೂಲದ ಮೊದಲ ಪೋಪ್ ಆಗಿದ್ದರು. ಅವರು ಮಾರ್ಚ್ 13, 2013 ರಂದು ತಮ್ಮ 76 ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆಯಾದರು. ಇವರು ಬಡವರ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದ ಜನಮನ್ನಣೆ ಗಳಿಸಿದ್ದ ಪೋಪ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಶೋಕಾಚರಣೆಯ ಅವಧಿಯಲ್ಲಿ, ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಸರ್ಕಾರದಿಂದ ಯಾವುದೇ ಅಧಿಕೃತ ಮನರಂಜನೆ ಕಾರ್ಯಕ್ರಮ ಇರುವುದಿಲ್ಲ ಎಂದು ಅದು ಹೇಳಿದೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಡಬಲ್ ನ್ಯುಮೋನಿಯಾದಿಂದ ಅಸ್ವಸ್ಥರಾಗಿದ್ದರು. ಅಲ್ಲದೆ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿತ್ತು.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement