ಮೀರತ್ : ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ವಿಚಿತ್ರ ಅಸಾಮಾನ್ಯ ಪ್ರಕರಣವೊಂದರಲ್ಲಿ, ಎಷ್ಟೇ ಹೇಳಿದರೂ ಗಡ್ಡ ತೆಗೆಯಲು ನಿರಾಕರಿಸಿದ ಗಂಡನನ್ನು ಬಿಟ್ಟು ಮಹಿಳೆಯೊಬ್ಬಳು ತನ್ನ ಗಂಡನ ಸಹೋದರ ಜೊತೆ ಓಡಿಹೋಗಿದ್ದಾಳೆ…!
ಮೀರತ್‌ನ ಉಜ್ವಲ್ ಗಾರ್ಡನ್ ಕಾಲೋನಿಯಲ್ಲಿ ವಾಸಿಸುವ ಮುಸ್ಲಿಂ ಧರ್ಮಗುರು ಶಕೀರ್ ಎಂಬ ವ್ಯಕ್ತಿ ಏಳು ತಿಂಗಳ ಹಿಂದೆಯಷ್ಟೇ 25 ವರ್ಷದ ಅರ್ಷಿ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಶಕೀರ್ ಪ್ರಕಾರ, ಅವರ ಪತ್ನಿ ಮದುವೆಯಾದ ಕೂಡಲೇ ಗಡ್ಡ ಬೋಳಿಸಲು ಒತ್ತಡ ಹೇರಲು ಪ್ರಾರಂಭಿಸಿದಳು.
ಕುಟುಂಬದ ಒತ್ತಡದಿಂದ ತಾನು ಶಕೀರ್ ಅವರನ್ನು ಮದುವೆಯಾಗಿದ್ದು, ಗಡ್ಡ ತೆಗೆಯಲು ಒಪ್ಪಿದರೆ ಮಾತ್ರ ಅವರೊಂದಿಗೆ ವಾಸಿಸುವುದಾಗಿ ಅರ್ಷಿ ಹೇಳಿದ್ದಾಳೆ ಎನ್ನಲಾಗಿದೆ. ಈ ವಿಷಯಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಶಕೀರ್ ತನ್ನ ಪತ್ನಿಯ ಕುಟುಂಬದವರಿಗೂ ಈ ಬಗ್ಗೆ ತಿಳಿಸಿದ್ದರು.
ಈ ಸಮಯದಲ್ಲಿ, ಅರ್ಷಿ ಪತಿ ಶಕೀರ್ ಅವರ ಕಿರಿಯ ಸಹೋದರನೊಂದಿಗೆ ಪ್ರಣಯ ಸಂಬಂಧ ಬೆಳೆಸಿದಳು. ಫೆಬ್ರವರಿ 3 ರಂದು ಇಬ್ಬರೂ ಮನೆಬಿಟ್ಟು ಓಡಿಹೋದರು. ಇದರಿಂದ ಶಕೀರ್ ಮತ್ತು ಅವರ ಕುಟುಂಬವು ಆಘಾತಕ್ಕೊಳಗಾಯಿತು.
ಸಾಮಾಜಿಕ ಮುಜುಗರವನ್ನು ತಪ್ಪಿಸುವ ಪ್ರಯತ್ನದಲ್ಲಿ, ಶಕೀರ್ ತನ್ನ ಸಂಬಂಧಿಕರ ಸಹಾಯದಿಂದ ಅವರನ್ನು ಹುಡುಕಲು ಪ್ರಯತ್ನಿಸಿದರು. ಅವರು ಸಿಗಲಿಲ್ಲ.
ನಂತರ ಅವರು ತನ್ನ ಹೆಂಡತಿ ಮತ್ತು ಸಹೋದರ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದರು ಮತ್ತು ಅರ್ಷಿಯ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದರು.
ಆದಾಗ್ಯೂ, ಈ ವಿಷಯದಲ್ಲಿ ಅರ್ಷಿ ಕುಟುಂಬವು ಮಧ್ಯಪ್ರವೇಶಿಸಲು ನಿರಾಕರಿಸಿತು, ತಾವು ಅವಳ ಜೊತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿರುವುದಾಗಿ ಹೇಳಿದರು.
ಪ್ರಕರಣ ತನಿಖೆ ಹಂತದಲ್ಲಿದ್ದು, ತನಿಖೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಯುಷ್ ವಿಕ್ರಮ ದೃಢಪಡಿಸಿದ್ದಾರೆ. ಅರ್ಷಿ ಈಗ ತನ್ನಿಂದ 5 ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಎಂದು ಶಕೀರ್ ಆರೋಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ