ಎಸ್‌ ಎಸ್‌ ಎಲ್‌ ಸಿ | ಕುಮಟಾ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಭೂಮಿಕಾ ಹೆಗಡೆ ರಾಜ್ಯಕ್ಕೆ ದ್ವಿತೀಯ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೆನರಾ ಎಜ್ಯಕೇಶನ್ ಸೊಸೈಟಿಯ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಶೇ. ೯೯.೮೪ ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಒಟ್ಟು ಶೇ. ೯೮.೧೪ ಫಳಿತಾಂಶ ದಾಖಲಿಸಿದ್ದು ೨೫ ಮಂದಿ ಡಿಸ್ಟಿಂಕ್ಷನ್, ೨೫ ಪ್ರಥಮ ದರ್ಜೆ, ೩ ಮಂದಿ ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಯಶಿಕಾ ಗುರುಪ್ರಸಾದ ಶೇ. ೯೮.೨೪(ದ್ವಿತೀಯ), ಶ್ರೀಲಕ್ಷ್ಮೀ ನಾಗೇಶ ಪೈ ಶೇ.೯೬.೦೮(ತೃತೀಯ), ಪನ್ನಗ ಪ್ರಕಾಶ ಶಾನಭಾಗ ಶೇ. ೯೪.೫೬, ಅನೀಶ ಬುದವಂತ ಹರಿಕಂತ್ರ ಹಾಗೂ ಶ್ರೇಯಾ ಸುಬ್ರಹ್ಮಣ್ಯ ನಾಯ್ಕ ಶೇ. ೯೩.೯೨ ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕ ವಿನಾಯಕ ಶಾನಭಾಗ ತಿಳಿಸಿದ್ದಾರೆ. ಕೆನರಾ ಎಜುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷ ವಸುದೇವ ಪ್ರಭು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಸುದ್ದಿಗಾರರೊಂದಿಗೆ ಗಿಬ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿನಾಯಕ ಶಾನಭಾಗ ಮಾತನಾಡಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿರುವ ನಮ್ಮ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ನಾಗರಾಜ ಹೆಗಡೆ ಸಾಧನೆ ನಮ್ಮ ಶಿಕ್ಷಕ ವೃಂದ, ಆಡಳಿತ ಮಂಡಳಿ, ಪಾಲಕರು ಶಿಕ್ಷಣ ಇಲಾಖೆ ಸಹಿತ ಎಲ್ಲರಿಗೂ ಸಂತಸ ತಂದಿದೆ. ಭೂಮಿಕಾ ಹೆಗಡೆ ಕಳೆದ ಎರಡು ವರ್ಷಗಳಿಂದ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟದಲ್ಲಿ ವಿಜೇತಳು, ಚೆಸ್‌ನಲ್ಲಿ ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದು ಬಹುಮುಖ ಪ್ರತಿಭೆ ಎಂದರು.

ಭೂಮಿಕಾ ಹೆಗಡೆ ತಂದೆ ನೆಲ್ಲಿಕೇರಿ ಬೆಣ್ಣೆ ಸರ್ಕಾರಿ ಪಿಯು ಕಾಲೇಜು ಪ್ರಾಧ್ಯಾಪಕ ನಾಗರಾಜ ಹೆಗಡೆ ಮಾತನಾಡಿ, ನನ್ನ ಮಗಳ ಸಾಧನೆಗೆ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರು ಮುಖ್ಯ ಕಾರಣ. ಅವಳ ಕಲಿಕೆಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಪ್ರೋತ್ಸಾಹ ಕೊಟ್ಟಿದ್ದು ಅಧ್ಯಯನಕ್ಕೆ ಎಲ್ಲ ರೀತಿಯ ಸಹಯೋಗ ನೀಡಿದ್ದಾರೆ. ಅವಳ ಪಠ್ಯ ಕಲಿಕೆಗೆ ಮಾತ್ರವಲ್ಲದೇ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದ ಪ್ರತಿಭೆಯ ವಿಕಸನಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಕೃತಜ್ಞರಾಗಿದ್ದೇವೆ ಎಂದಿದ್ದಾರೆ. ಭೂಮಿಕಾ ತಾಯಿ ರೇಣುಕಾ ಹೆಗಡೆ, ಎಲ್ಲ ಶಿಕ್ಷಕರು ಇದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement