ನವದೆಹಲಿ: ವಾಡಿಕೆಗಿಂತ ಮುಂಚಿತವಾಗಿ ನೈಋತ್ಯ ಮಾನ್ಸೂನ್ ಆಗಮಿಸುತ್ತಿದ್ದು ಈಗಾಗಲೇ ಮಾನ್ಸೂನ್ ಮಾರುತಗಳು ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪ ತಲುಪಿವೆ ಎಂದು ಕೇಂದ್ರ ಹವಾಮಾನ ಇಲಾಖೆ ಮಂಗಳವಾರ ಮಾಹಿತಿ ನೀಡಿದೆ.
ಮಂಗಳವಾರ ನೈಋತ್ಯ ಮಾನ್ಸೂನ್ ಮಾರುತಗಳು ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಪ್ರದೇಶಗಳಿಗೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದರಿಂದಾಗಿ ಕಳೆದ ಎರಡು ದಿನಗಳಿಂದ ನಿಕೋಬಾರ್ ದ್ವೀಪಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಿದೆ. ಈ ಅವಧಿಯಲ್ಲಿ ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಮೇಲೆ ಪಶ್ಚಿಮ ದಿಕ್ಕಿನ ಗಾಳಿಯ ಬಲ ಹೆಚ್ಚಾಗಿದೆ ಎಂದು ಅದು ಮಾಹಿತಿ ನೀಡಿದೆ.
ಮುಂದಿನ ಮೂರು ನಾಲ್ಕು ದಿನಗಳಲ್ಲಿ ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಹೆಚ್ಚಿನ ಭಾಗಗಳಿಗೆ, ದಕ್ಷಿಣ ಬಂಗಾಳ ಕೊಲ್ಲಿಯ ಹೆಚ್ಚಿನ ಪ್ರದೇಶಗಳಿಗೆ, ಸಂಪೂರ್ಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಂಡಮಾನ್ ಸಮುದ್ರದ ಉಳಿದ ಭಾಗಗಳಿಗೆ ಹಾಗೂ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ಮಾನ್ಸೂನ್ ಮುನ್ನಡೆಯಲು ಅನುಕೂಲಕರ ಪರಿಸ್ಥಿತಿಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1 ರ ಸಾಮಾನ್ಯ ದಿನಾಂಕಕ್ಕಿಂತ ಮುಂಚಿತವಾಗಿ, ಮೇ 27 ರಂದು ನೈಋತ್ವ ಮಾನ್ಸೂನ್ ಮಳೆ ಕೇರಳವನ್ನು ತಲುಪುವ ಸಾಧ್ಯತೆಯಿದೆ. ಐಎಂಡಿ ದತ್ತಾಂಶದ ಪ್ರಕಾರ, ನಿರೀಕ್ಷೆಯಂತೆ ಮಾನ್ಸೂನ್ ಕೇರಳಕ್ಕೆ ಆಗಮಿಸಿದರೆ, 2009 ರಲ್ಲಿ ಮೇ 23 ರಂದು ಪ್ರಾರಂಭವಾಗಿತ್ತು.
ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂನ್ 1 ರ ವೇಳೆಗೆ ಕೇರಳದ ಮೇಲೆ ಪ್ರಾರಂಭವಾಗಲಿದ್ದು, ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸಲಿದೆ. ಇದು ಸೆಪ್ಟೆಂಬರ್ 17 ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ ಮತ್ತು ಅಕ್ಟೋಬರ್ 15 ರ ವೇಳೆಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2025ರಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ