ಸಿಗರೇಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಫ್ಟ್‌ವೇರ್ ಉದ್ಯೋಗಿಯ ಮೇಲೆ ಕಾರು ಹರಿಸಿದ ಬೆಂಗಳೂರಿನ ವ್ಯಕ್ತಿ….!

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಹಿಟ್ ಅಂಡ್ ರನ್ ಘಟನೆಯಲ್ಲಿ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಸಾವಿಗೀಡಾಗಿದ್ದು, ಅವರ ಸ್ನೇಹಿತ ಗಾಯಗೊಂಡಿದ್ದಾರೆ. ಸಿಗರೇಟ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ.
ಮೇ 10 ರ ಮುಂಜಾನೆ ಈ ಘಟನೆ ನಡೆದಿದೆ ಎನ್ನಲಾಗಿದ್ದು ಮೃತ ಸಂಜಯ ಮತ್ತು ಅವರ ಸ್ನೇಹಿತ ಚೇತನ್ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ಅವರು ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಬೆಳಿಗ್ಗೆ 4 ಗಂಟೆ ಸುಮಾರಿಗೆ ರಸ್ತೆಬದಿಯ ಅಂಗಡಿಯಲ್ಲಿ ಚಹಾ ಕುಡಿಯಲು ಆಗಮಿಸಿದ್ದರು.
ಅವರು ಅಲ್ಲಿ ನಿಂತಿದ್ದಾಗ, ಒಬ್ಬ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಹುಂಡೈ ಕ್ರೆಟಾದಲ್ಲಿ ಬಂದು ಸಂಜಯ ಮತ್ತು ಚೇತನ್ ಅವರ ಬಳಿ ಸಿಗರೇಟ್ ಕೊಡುವಂತೆ ಹೇಳಿದ್ದಾನೆ. ಅವರು ನಿರಾಕರಿಸಿ ನೀವೇ ಖರೀದಿಸಿ ಎಂದು ಹೇಳಿದ್ದಾರೆ, ಇದು ಅವರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ನಂತರ ಸಂಜಯ ಮತ್ತು ಚೇತನ್ ತಮ್ಮ ಮೋಟಾರ್ ಸೈಕಲ್‌ನಲ್ಲಿ ತೆರಳಿದ್ದಾರೆ, ಆಗ ಆರೋಪಿ ಪ್ರತೀಕ ಎಂಬಾತ ತನ್ನ ವಾಹನದಲ್ಲಿ ಅವರನ್ನು ಹಿಂಬಾಲಿಸಿ ಕೋಣನಕುಂಟೆ ಕ್ರಾಸ್ ಬಳಿ ಯು-ಟರ್ನ್ ಮಾಡಲು ಪ್ರಯತ್ನಿಸುತ್ತಿದ್ದಾಗ ಉದ್ದೇಶಪೂರ್ವಕವಾಗಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಪರಿಣಾಮ ಮೋಟಾರ್ ಸೈಕಲ್ ಹತ್ತಿರದ ಅಂಗಡಿಯ ಶಟರ್‌ಗೆ ಡಿಕ್ಕಿ ಹೊಡೆದು, ಸಂಜಯ ತೀವ್ರವಾಗಿ ಗಾಯಗೊಂಡರು ಹಾಗೂ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡರು.ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಎರಡು ದಿನಗಳ ನಂತರ ಸಂಜಯ ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಪ್ರಮುಖ ಸುದ್ದಿ :-   ಪಾಕಿಸ್ತಾನ ಪರ ಬೇಹುಗಾರಿಕೆ: ಹರಿಯಾಣ ಮೂಲದ ಯೂಟ್ಯೂಬರ್ ಸೇರಿ 6 ಜನರ ಬಂಧನ

ಹಿಂದೆ ಕುಳಿತಿದ್ದ ಚೇತನ್ ಗಂಭೀರ ಗಾಯಗಳಿಗೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಪೂರ್ಣ ದೃಶ್ಯವು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ, ಆರೋಪಿಯು ಕುಡಿದ ಮತ್ತಿನಲ್ಲಿದ್ದನೆಂದು ವರದಿಯಾಗಿದ್ದು, ಪಾರ್ಟಿಯಲ್ಲಿ ಭಾಗವಹಿಸಿ ತನ್ನ ಹೆಂಡತಿಯೊಂದಿಗೆ ಮನೆಗೆ ಹಿಂತಿರುಗುತ್ತಿದ್ದ ಎಂದು ಹೇಳಲಾಗಿದೆ. ವೀಡಿಯೊ ಪುರಾವೆಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ಬೆಂಗಳೂರು ಪೊಲೀಸರು ಪ್ರತೀಕನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement