ಬೆಂಗಳೂರು: ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದ್ದು, ಮೇ 21ರ ಹೊತ್ತಿಗೆ ಕರ್ನಾಟಕ ಕರಾವಳಿಗೆ ಹತ್ತಿರದ ಪೂರ್ವ ಮಧ್ಯ ಅರಬ್ಬಿ ಸಮುದ್ರದ ಮೇಲೆ ಮೇಲ್ಮಟ್ಟದ ವಾಯುಭಾರ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮೇ 21 ರಂದು ರಾಜ್ಯ ನಾಲ್ಕು ಜಿಲ್ಲೆಗಳಲ್ಲಿ ಅತ್ಯಂತ ಭಾರಿಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ.
ಮೇ 21 ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಹಾಸನ, ಕೊಡಗು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಭಾರಿ ಮಳೆಯ ಮುನ್ಸೂಚನೆ ಇದೆ.ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ರಾತ್ರಿಯಲ್ಲಿ ಅತಿ ಹೆಚ್ಚು ಮಳೆ, ಆಲಿಕಲ್ಲು ಮಳೆ ಮತ್ತು ಬಲವಾದ ಗಾಳಿ ಬೀಸಲಿದೆ. ಹಾಗೂ ಏಳು ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿ ಹಾಗೂ ಒಳನಾಡಿನಲ್ಲಿ ಮೇ 25 ರಿಂದ ಮತ್ತೆ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಮಳೆ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.
ಮಳೆ ಪರಿಣಾಮ ಎದುರಿಸಲು ಸಜ್ಜಾಗುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದು ಪೂರ್ವ ಮುಂಗಾರು ಮಳೆಯಾದ್ದರಿಂದ ಗುಡುಗು, ಮಿಂಚು ಸಹಿತ ಗಾಳಿ ಮಳೆಯಾಗಲಿದೆ ಎಂದು ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ