ಮಂಗಳೂರು ವಿವಿ ‘ಯಕ್ಷಮಂಗಳ ಕೃತಿ ಪ್ರಶಸ್ತಿʼಗೆ ಅಶೋಕ ಹಾಸ್ಯಗಾರರ ‘ದಶರೂಪಕಗಳ ದಶಾವತಾರ’ ಸಂಶೋಧನಾ ಪುಸ್ತಕ ಆಯ್ಕೆ

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ​​​​ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ ಕೊಡಮಾಡುವ 2024ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ಹಿರಿಯ ಅರ್ಥದಾರಿ, ವಿದ್ವಾಂಸ ಡಾ.ರಮಾನಂದ ಬನಾರಿ, ಹಿರಿಯ ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್.ಸಾಮಗ ಹಾಗೂ ತೆಂಕುತಿಟ್ಟು ಯಕ್ಷಗಾನದ ಹಿರಿಯ ವೇಷಧಾರಿ ಸದಾಶಿವ ಶೆಟ್ಟಿಗಾರ ಸಿದ್ಧಕಟ್ಟೆ ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಲೇಖಕ, ಹಿರಿಯ ಪತ್ರಕರ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಸಂಶೋಧನಾ ಪುಸ್ತಕ ಆಯ್ಕೆಯಾಗಿದೆ.
ಯಕ್ಷಮಂಗಳ ಪ್ರಶಸ್ತಿ 25,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನೊಳಗೊಂಡಿದೆ. ಯಕ್ಷಮಂಗಳ ಕೃತಿ ಪ್ರಶಸ್ತಿಯು 10,000 ರೂ. ನಗದು,‌ ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ.
ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪ್ರೊ.ಪಾದೆಕಲ್ಲು ವಿಷ್ಣು ಭಟ್ಟ, ಯಕ್ಷಗಾನ ಸಂಘಟಕ ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕರಾದ‌ ಡಾ.ಧನಂಜಯ ಕುಂಬ್ಳೆ ಅವರನ್ನು ಒಳಗೊಂಡಿರುವ ಆಯ್ಕೆ ಸಮಿತಿಯು ಪ್ರಶಸ್ತಿಗೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಜೂನ್ ತಿಂಗಳಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ‌ಎಲ್.ಧರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಯಕ್ಷಮಂಗಳ ಪ್ರಶಸ್ತಿ ಮತ್ತು ಕೃತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವರಾದ ಕೆ.ರಾಜು ಮೊಗವೀರ ಹಾಗೂ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಅಂಕೋಲಾ | ವಿದ್ಯುತ್ ತಂತಿ ತಗುಲಿ ಯುವಕ ಸಾವು

ಡಾ.ರಮಾನಂದ ಬನಾರಿ: ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ರಮಾನಂದ ಬನಾರಿ ಅವರು ಯಕ್ಷಗಾನ ಅರ್ಥದಾರಿ ಹಾಗೂ ವಿದ್ವಾಂಸರು. 1940ರ ಜೂನ್ 4ರಂದು ಕಾಸರಗೋಡಿನ ಕಿರಿಕ್ಕಾಡುವಿನಲ್ಲಿ ಜನಿಸಿದ ಅವರು ಎಂಬಿಬಿಎಸ್ ಪದವೀಧರರಾಗಿದ್ದು, ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯ, ಯಕ್ಷಗಾನ, ಕನ್ನಡ ಸಂಸ್ಕೃತಿ ಪರ ಹೋರಾಟ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆ ಕೀರಿಕ್ಕಾಡು ವಿಷ್ಡುಮಾಸ್ಟರ್ ಅವರಿಂದ ಯಕ್ಷಗಾನದ ಪ್ರೇರಣೆ ‌ಪಡೆದ ಇವರು 16ನೇ ವಯಸ್ಸಿನಲ್ಲೇ ಅರ್ಥಗಾರಿಕೆಯಲ್ಲಿ ತೊಡಗಿಸಿಕೊಂಡವರು. ಸಾಹಿತ್ಯದಲ್ಲಿ ಮಕ್ಕಳ ಕವನ ಸಂಕಲನ, ಹನಿಗವನ ಸಂಕಲನ, ವೈದ್ಯಕೀಯ ಕವನ ಸಂಕಲನ ಸೇರಿದಂತೆ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೀವವೃಕ್ಷ ಇವರ ಅಭಿನಂದನಾ ಗ್ರಂಥ.
ಪ್ರೊ.ಎಂ.ಎಲ್. ಸಾಮಗ: ಯಕ್ಷಗಾನ‌ ಕಲಾವಿದರು, ಖ್ಯಾತ ಅರ್ಥದಾರಿಯಾಗಿರುವ ಪ್ರೊ.ಎಂ.ಎಲ್.ಸಾಮಗ ಅವರು ಶ್ರೇಷ್ಠ ವಿದ್ವಾಂಸರೂ ಆಗಿದ್ದಾರೆ. ಯಕ್ಷಕಲೆಯ ದಿಗ್ಗಜರಾದ ಶಂಕರನಾರಾಯಣ ಸಾಮಗರ ಮಗನಾದ ಎಂ.ಲಕ್ಷ್ಮೀನಾರಾಯಣ ಸಾಮಗ ಜನವರಿ‌ 31, 1949ರಲ್ಲಿ ಜನಿಸಿದರು. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ಯಕ್ಷಗಾನದ ತೆಂಕು ತಿಟ್ಟು ಹಾಗೂ ಬಡಗುತಿಟ್ಟು ಎರಡು ಪ್ರಕಾರಗಳಲ್ಲೂ ಕಲಾಪ್ರೌಢಿಮೆ ತೋರಿದ್ದಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಸಾಮಗರು ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
ಸದಾಶಿವ ಶೆಟ್ಟಿಗಾರ​: ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಕಲಾವಿದರಾದ ಸದಾಶಿವ ಶೆಟ್ಟಿಗಾರ ಸಿದ್ದಕಟ್ಟೆ ಅವರು ಖ್ಯಾತ ಬಣ್ಣದ ವೇಷಧಾರಿಯಾಗಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಮಾಲಿಂಗ ಹಾಗೂ ರೆಂಜಾಳ ರಾಮಕೃಷ್ಣ ಅವರಲ್ಲಿ ನಾಟ್ಯಾಭ್ಯಾಸ ಮಾಡಿದ್ದ ಇವರು 18ವರ್ಷಕ್ಕೇ ರಂಗಪ್ರವೇಶ ಮಾಡಿದ್ದರು. ಕಟೀಲು, ತಲಕಳ, ಧರ್ಮಸ್ಥಳ, ಹೊಸನಗರ, ಹನುಮಗಿರಿ ಸೇರಿಂದಂತೆ ಅನೇಕ ಮೇಳಗಳಲ್ಲಿ ಪಾತ್ರ ನಿರ್ವಹಿಸಿರುವ ಇವತು ರುದ್ರ, ಭೀಮ, ಸಿಂಹ, ಮಹಿಷಾಸುರ, ಕುಂಭಕರ್ಣ, ಶೂರ್ಪನಖಿ, ತಾಟಕಿ ಮೊದಲಾದ ಪಾತ್ರಗಳಿಗೆಮೆರುಗು ತುಂಬಿದವರು.
ಅಶೋಕ ಹಾಸ್ಯಗಾರ: ಹಿರಿಯ ಪತ್ರಕರ್ತ, ವಿಮರ್ಶಕ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಭಾಜನವಾಗಿದೆ. ಈ ಕೃತಿಯು ಯಕ್ಷಗಾನ ಹಾಗೂ ನಾಟ್ಯಶಾಸ್ತ್ರದ ಶಾಸ್ತ್ರೀಯತೆಯನ್ನು ತುಲನಾತ್ಮಕವಾಗಿ ನೋಡುವ ಒಂದು ಸಂಶೋಧನಾ ಕೃತಿಯಾಗಿದೆ. ಯಕ್ಷಗಾನವೂ ಒಂದು ಶಾಸ್ತ್ರೀಯ ಕಲೆ ಎಂಬ ನಿಟ್ಟಿನಲ್ಲಿ ಶೋಧನೆಯ ಸೂಕ್ಷ್ಮದೃಷ್ಟಿ ಹೊಂದಿರುವ ಈ ಕೃತಿಯಲ್ಲಿ 9 ಅಧ್ಯಾಯಗಳಿವೆ. ರಂಗ ಲಕ್ಷಣ, ವಿಸ್ತೀರ್ಣ, ಚೌಕಿಯಲ್ಲಿ ಪಾತ್ರದಾರಿಗಳು ಕುಳಿತುಕೊಳ್ಳುವ ವಿನ್ಯಾಸ, ಹೀಗೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ಹಾಗೂ ನಾಟ್ಯ ಶಾಸ್ತ್ರೀಯವಾಗಿ ಅವಲೋಕಿಸಿರುವ ಈ ಕೃತಿಯು ಯಕ್ಷಗಾನ ಸಂಶೋಧನೆಗೆ ಮಹತ್ವದ‌ ಕೊಡುಗೆಯಾಗಿದೆ.

ಪ್ರಮುಖ ಸುದ್ದಿ :-   ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ | ಆರೋಪಿಗಳಿಗೆ ಜಾಮೀನು; ಹಿಂಬಾಲಕರೊಂದಿಗೆ ರೋಡ್ ಶೋ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement