ಮಂಗಳೂರು : ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಹೀಂ ಎಂಬ ವ್ಯಕ್ತಿಯ ಹತ್ಯೆಯ ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕು ವ್ಯಾಪ್ತಿಯಲ್ಲಿ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆ ಕೆಲವು ದಿನಗಳ ಹಿಂದೆ ನಡೆದಿತ್ತು. ಈಗ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿಪಿಕಪ್ ವಾಹನ ಚಾಲಕನಾಗಿದ್ದ ರಹೀಮ್ ಎಂಬಾತನನ್ನು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಇರಾಕೋಡಿ ಎಂಬಲ್ಲಿ ಮನೆಯೊಂದರ ಮುಂದೆ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಹೀಮ್ ಜೊತೆಗಿದ್ದ ಹನೀಫ್ ಎಂಬವರ ಮೇಲೆಯೂ ದಾಳಿ ಮಾಡಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯ ನಂತರ ಯಾವುದೇ ಅಹಿತರ ಘಟನೆ ನಡೆಯದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಕಡಬ, ಪುತ್ತೂರು ಮತ್ತು ಸುಳ್ಯ ತಾಲೂಕುಗಳಲ್ಲಿ ಮೇ 27ರ ಸಂಜೆ 6 ಗಂಟೆಯಿಂದ ಮೇ 30ರ ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಅಪರ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಘಟನೆಯ ನಂತರ ದಕ್ಷಿಣ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅವರ ವರದಿಯನ್ನು ಆಧರಿಸಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಈ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಕೋಲುಗಳು, ಕತ್ತಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ದೊಣ್ಣೆಗಳು ಅಥವಾ ದೈಹಿಕ ಹಾನಿಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು, ಪಟಾಕಿ ಸಿಡಿಸುವುದು ಮತ್ತು ಸ್ಫೋಟಕ ಅಥವಾ ವಿನಾಶಕಾರಿ ವಸ್ತುಗಳನ್ನು ಹೊಂದಿರುವುದನ್ನು ನಿಷೇಧಿಸಲಾಗಿದೆ.
ಪ್ರತಿಭಟನೆಗಳು, ವಿಜಯೋತ್ಸವ ಆಚರಣೆಗಳು, ಸಾರ್ವಜನಿಕ ರ್ಯಾಲಿಗಳು, ಪ್ರತಿಭಟನಾ ಮೆರವಣಿಗೆಗಳು, ಬಂದ್‌ಗಳು, ರಸ್ತೆ ತಡೆಗಳು ಮತ್ತು ರಾಜಕೀಯ/ಸಾರ್ವಜನಿಕ ಸಭೆಗಳಿಗೆ ಅನುಮತಿಸಲಾಗುವುದಿಲ್ಲ.
ಆದರೆ ಪೂರ್ವ ನಿಗದಿತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆದೇಶದಿಂದ ವಿನಾಯಿತಿ ಪಡೆದಿವೆ.
ನಿಮ್ಮ ಕಾಮೆಂಟ್ ಬರೆಯಿರಿ