ರಾಜ್ಯಸಭೆ ಪ್ರವೇಶಿಸಲು ಸಿದ್ಧರಾದ ನಟ ಕಮಲ ಹಾಸನ್‌

ಚೆನ್ನೈ: ಅಭಿಜಾತ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ)ಪಕ್ಕಕ್ಕೆ ಡಿಎಂಕೆ ಕೋಟಾದ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.
ಡಿಎಂಕೆಯು ಪಿ ವಿಲ್ಸನ್ ಅವರನ್ನು ಎರಡನೇ ಅವಧಿಗೆ ಆಯ್ಕೆ ಮಾಡಿದ್ದರೆ, ಆರ್ ಶಿವಲಿಂಗಂ ಮತ್ತು ರೋಕಿಯಾ ಮಲಿಕ್ ಇತರ ಅಭ್ಯರ್ಥಿಗಳಾಗಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿಎಂಕೆಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಪಕ್ಷಕ್ಕೆ ಡಿಎಂಕೆ ಕೋಟಾದ ಒಂದು ಸ್ಥಾನವನ್ನು ನೀಡಲಾಗಿದೆ.

2024 ರ ಚುನಾವಣೆಯಲ್ಲಿ ಎಂಎನ್ಎಂ ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿತ್ತು. ಈ ಮೈತ್ರಿಕೂಟವು ತಮಿಳುನಾಡಿನ ಎಲ್ಲಾ 39 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆ ವೇಳೆ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕಮಲ್ ಹಾಸನ್ ಅವರಿಗೆ ಬೆಂಬಲಕ್ಕೆ ಪ್ರತಿಯಾಗಿ ರಾಜ್ಯಸಭಾ ಸ್ಥಾನವನ್ನು ನೀಡುವ ಭರವಸೆ ನೀಡಿದ್ದರು ಎಂದು ಡಿಎಂಕೆ ಮೂಲಗಳು ತಿಳಿಸಿವೆ.
ತಮಿಳುನಾಡಿನ ಆರು ರಾಜ್ಯಸಭಾ ಸ್ಥಾನಗಳು ಈ ತಿಂಗಳು ಖಾಲಿಯಾಗಲಿದ್ದು, ಅವುಗಳಿಗೆ ಜೂನ್ 19 ರಂದು ಚುನಾವಣೆ ನಡೆಯಲಿದೆ. ಪ್ರಸ್ತುತ, ಅವುಗಳಲ್ಲಿ ಮೂರು ಡಿಎಂಕೆ ಸದಸ್ಯರಾಗಿದ್ದಾರೆ, ಒಬ್ಬರು ಎಐಎಡಿಎಂಕೆ, ಮತ್ತೊಬ್ಬರು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಮತ್ತು ಇನ್ನೊಬ್ಬರು ಎಂಡಿಎಂಕೆಯ ವೈಕೊ ಅವರಾಗಿದ್ದಾರೆ.

ಪ್ರಮುಖ ಸುದ್ದಿ :-   ರೈತರಿಗೆ ಸಿಹಿ ಸುದ್ದಿ ; 14 ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ತಮಿಳುನಾಡು ಸಚಿವ ಪಿಕೆ ಶೇಖರ ಬಾಬು ಇತ್ತೀಚೆಗೆ ಕಮಲ್ ಹಾಸನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸ್ಟಾಲಿನ್ ಅವರ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಬುಧವಾರ (ಮೇ ೨೮) ಎಂಎನ್‌ಎಂ ಕಾರ್ಯಕಾರಿಣಿ ಸಭೆಯು ಕಮಲ್‌ ಹಾಸನ್‌ ಅವರನ್ನು ರಾಜ್ಯಸಭೆ ಅಭ್ಯರ್ಥಿಯಾಗಿ ಹೆಸರಿಸುವ ನಿರ್ಣಯವನ್ನು ಅಂಗೀಕರಿಸಿತು.
ಎಂಎನ್‌ಎಂ ಅನ್ನು ಕಮಲ್ ಹಾಸನ್ ಸ್ಥಾಪಿಸಿದರು ಮತ್ತು ಇದನ್ನು 2018 ರಲ್ಲಿ ಮಧುರೈನಲ್ಲಿ ಸ್ಥಾಪಿಸಲಾಯಿತು. 2019 ರ ಲೋಕಸಭೆ ಚುನಾವಣೆಯಲ್ಲಿ, ಎಂಎನ್‌ಎಂ ತಾನು ಸ್ಪರ್ಧಿಸಿದ ಸ್ಥಾನಗಳಲ್ಲಿ ಶೇ 3.72 ರಷ್ಟು ಮತಗಳನ್ನು ಗಳಿಸಿತು. ಪಕ್ಷವು 2021 ರ ತಮಿಳುನಾಡು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತು ಆದರೆ ಶೂನ್ಯ ಸ್ಥಾನವನ್ನು ಗಳಿಸಿತು. 2021 ರ ಚುನಾವಣೆಯಲ್ಲಿ, ಕಮಲ್ ಹಾಸನ್ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ಅಲ್ಪ ಅಂತರದಿಂದ ಸೋತರು. 2022 ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವು 140 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಒಂದನ್ನೂ ಗೆಲ್ಲಲು ವಿಫಲವಾದಾಗ ಮತ್ತೊಂದು ಹಿನ್ನಡೆಯನ್ನು ಅನುಭವಿಸಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement