ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ : ಹುಬ್ಬಳ್ಳಿ ಗಲಭೆ ಸೇರಿ 43 ಪ್ರಕರಣ ಹಿಂಪಡೆದ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು : ಹುಬ್ಬಳ್ಳಿ ಗಲಭೆ ಪ್ರಕರಣ (Hubballi Riot) ಸೇರಿದಂತೆ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ರದ್ದುಗೊಳಿಸಿದೆ.
ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ. ಈ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಒಪ್ಪಿಗೆ ಕೋರಿದ್ದ ರಾಜಕಾರಣಿಗಳ ವಿರುದ್ಧದ 17 ಪ್ರಕರಣಗಳಿಗೆ ವಜಾಕ್ಕೆ ಅನುಮತಿ ಕೋರಿದ್ದ ಆದೇಶವೂ ವಜಾಗೊಳ್ಳಲಿದೆ.

ಸಂಘಟನೆಗಳ ಹೋರಾಟಗಾರರು, ರಾಜಕಾರಣಿಗಳು ಸೇರಿದಂತೆ 43 ಪ್ರಕರಣಗಳನ್ನು 2024ರ ಅಕ್ಟೋಬರ್ 10ರಂದು ರಾಜ್ಯ ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಗಿರೀಶ ಭಾರದ್ವಾಜ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ, ನ್ಯಾ.ಕೆ.ವಿ ಅರವಿಂದ ಅವರಿದ್ದ ಹೈಕೋರ್ಟ್​ ದ್ವಿಸದಸ್ಯ ಪೀಠ ಗುರುವಾರ (ಮೇ 29) ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
“ಸರ್ಕಾರದ ಆದೇಶವನ್ನು ಪಕ್ಕಕ್ಕೆ ಸರಿಸಲಾಗಿದೆ. ಆದೇಶವು ಅಸಿಂಧುವಾಗಿದೆ. ಕಾನೂನಿನ ಪರಿಣಾಮಗಳು ಜಾರಿಯಾಗಲಿವೆ” ಎಂದು ನ್ಯಾಯಾಲಯ ಹೇಳಿತು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ಅರ್ಜಿದಾರರ ಪರ ವಕೀಲ ವೆಂಕಟೇಶ್‌ ದಳವಾಯಿ, “ರಾಜ್ಯ ಸರ್ಕಾರವು ಸರ್ಕಾರಿ ಅಭಿಯೋಜಕರಿಗೆ ನಿರ್ದೇಶನ ನೀಡಲಾಗದು,ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಪ್ರಾಸಿಕ್ಯೂಟರ್‍ ನಿರ್ದೇಶನ ನೀಡುವ ಅಧಿಕಾರ ರಾಜ್ಯ ಸಚಿವ ಸಂಪುಟಕ್ಕೆ ಇಲ್ಲ. ಸಿಆರ್‌ಪಿಸಿ ಸೆಕ್ಷನ್‌ 321ರ ಅಡಿ ಸರ್ಕಾರಿ ಅಭಿಯೋಜಕರಿಗೆ ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಸರ್ಕಾರಿ ಅಭಿಯೋಜಕರ ಕಚೇರಿಯು ಅಂಚೆ ಕಚೇರಿಯ ರೀತಿ ನಡೆದುಕೊಳ್ಳಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪೊಂದರಲ್ಲಿ ಹೇಳಿದೆ. ಪ್ರಕರಣ ಹಿಂಡೆಯುವಂತೆ ಅಭಿಯೋಜಕರಿಗೆ ಸರ್ಕಾರ ಒತ್ತಡ ಹೇರಲು ಸಾಧ್ಯವಿಲ್ಲ. ಪ್ರಕರಣಗಳನ್ನು ಹಿಂಪಡೆಯಲು ಅರ್ಹವಾಗಿಲ್ಲ ಎಂದು ಕಾನೂನು ಮತ್ತು ಅಭಿಯೋಜನಾ ಇಲಾಖೆಯು ಟಿಪ್ಪಣಿಯಲ್ಲಿ ಹೇಳಿವೆ. ಅದಾಗ್ಯೂ, ಸರ್ಕಾರ ಆದೇಶ ಮಾಡಿದೆ” ಎಂದು ವಾದಿಸಿದ್ದರು.
“ಹಲವು ಆರೋಪಿಗಳ ಮೇಲೆ ದೊಂಬಿ, ಕೊಲೆ ಪ್ರಯತ್ನ, ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಅತಿಕ್ರಮ ಪ್ರವೇಶದಂಥ ಗಂಭೀರ ಆರೋಪಗಳಿವೆ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗೆ ಆಕ್ಷೇಪಿಸಿ ಹುಬ್ಬಳ್ಳಿಯಲ್ಲಿ ಒಂದು ಸಮುದಾಯದವರು ಹಳೇಹುಬ್ಬಳ್ಳಿ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದ ಸಂಬಂಧ ದಾಖಲಾಗಿರುವ ಪ್ರಕರಣವೂ ಇದರಲ್ಲಿ ಸೇರಿದೆ” ಎಂದು ತಿಳಿಸಿದ್ದರು.

ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement