ಬೆಂಗಳೂರು : ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ತಪಾಸಣೆ ವೇಳೆ ಅಪಘಾತಕ್ಕೀಡಾಗಿ ಮಗು ಸಾವಿಗೀಡಾದ ಘಟನೆ ನಡೆದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಲವಾರು ಸೂಚನೆಗಳನ್ನು ನೀಡಿದ್ದಾರೆ.
ಈ ಸಂಬಂಧ ಶನಿವಾರ ಸುತ್ತೋಲೆ ಹೊರಡಿಸಿರುವ ಡಿಜಿಪಿ-ಐಜಿಪಿ ಡಾ. ಎಂ.ಎ.ಸಲೀಂ, ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಿಸದ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡಬಾರದು. ವಾಹನ ತಪಾಸಣೆ ವೇಳೆ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಧರಿಸಿರಬೇಕು. ರಸ್ತೆಯಲ್ಲಿ ದಿಢೀರನೇ ಬಂದು ವಾಹನಗಳನ್ನು ಅಡ್ಡಗಟ್ಟುವುದಾಗಲಿ ಅಥವಾ ವಾಹನಗಳ ಕೀ ಕೈ ತೆಗೆದುಕೊಳ್ಳವುದಾಗಲಿ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಡ್ಯದಲ್ಲಿ ಮಗು ಸಾವು ಹಾಗೂ ದಾವಣಗೆರೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆದ ಪ್ರಕರಣವನ್ನು ಉಲ್ಲೇಖಿಸಿ ಆದೇಶ ಹೊರಡಿಸಿರುವ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವ ವೇಳೆ ರಸ್ತೆ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಸೂಚನೆಗಳು
* ಸಕಾರಣವಿಲ್ಲದೆ ದಾಖಲೆಗಳನ್ನು ಪರೀಕ್ಷಿಸಲು ವಾಹನಗಳನ್ನು ಪೊಲೀಸರು ತಡೆದು ತಪಾಸಣೆಗೊಳಪಡಿಸಬಾರದು.
* ಕಣ್ಣಿಗೆ ಕಾಣುವ (Visible violations) ಸಂಚಾರ ನಿಯಮ ಉಲ್ಲಂಘನೆಗಳು ಕಂಡು ಬಂದಲ್ಲಿ ಮಾತ್ರ ವಾಹನ ತಡೆ ತಪಾಸಣೆ ನಡೆಸಬೇಕು. ಪ್ರಕರಣಗಳನ್ನು ದಾಖಲಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು.
(ಎ) ಹೆದ್ದಾರಿಗಳಲ್ಲಿ ಝಿಗ್ ಝಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು. (ಬಿ) ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಸೂಚಿಸಬಾರದು. (ಸಿ) ಬೈಕ್ನ ಹಿಂಬದಿ ಸವಾರ (Pillion rider) ನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿ ಕೈ ಕಿತ್ತುಕೊಳ್ಳುವುದನ್ನು ಮಾಡಬಾರದು.
* ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಬೆನ್ನಟ್ಟಿ ಹಿಡಿಯಬಾರದು. ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.
* ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುವಾಗ ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ತಮ್ಮ ಸುರಕ್ಷತೆಗೆ ರಿಫ್ಲೆಕ್ಟಿವ್ ಜಾಕೆಟ್ಗಳನ್ನು ಪೊಲೀಸರು ಧರಿಸಬೇಕು. ಸಂಜೆ ವೇಳೆ ಕಡ್ಡಾಯವಾಗಿ ಎಲ್ಇಡಿ ಬ್ಯಾಟನ್ ಗಳನ್ನು ಉಪಯೋಗಿಸಬೇಕು ಹಾಗೂ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು.
* ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ (ಟಿಎಂಸಿ) ಅಥವಾ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ (ಐಟಿಎಂಎಸ್) ಹೊಂದಿರುವ ಘಟಕಗಳಲ್ಲಿ ಆದಷ್ಟು ಸಂಪರ್ಕ ರಹಿತ ಪ್ರಕರಣಗಳನ್ನು ದಾಖಲಿಸಬೇಕು.
* ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಜನ ಜಾಗೃತಿ ಅಭಿಯಾನ ನಡೆಸಬೇಕು.
* ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಸೇರಿ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು. ಇಂತಹ ವಾಹನಗಳ ವಿರುದ್ಧ ಎಸ್ಟಿವಿಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮಗಳನ್ನು ಅನುಸರಿಬೇಕು.
* ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100 ರಿಂದ 150 ಮೀಟರ್ ಮೊದಲೇ ರಿಫೆಕ್ಟಿವ್ ರಬ್ಬರ್ ಕೋನ್ಗಳನ್ನು ಹಾಗೂ ಸುರಕ್ಷತಾ ಸಲಕರಣಿಗಳನ್ನು ಅಳವಡಿಕೆ, ರಾತ್ರಿ ಮತ್ತು ತಡರಾತ್ರಿಯ ಸಂದರ್ಭದಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ ಅಥವಾ ಜಂಕ್ಷನ್ ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡಬೇಕು.
* ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆಯ ಸಂದರ್ಭದಲ್ಲಿ ಇಂತ ಕಾನೂನು ಸುವ್ಯವಸ್ಥೆ ಪೊಲೀಸರ ನೆರವು ಪಡೆಯಬೇಕು.
ನಿಮ್ಮ ಕಾಮೆಂಟ್ ಬರೆಯಿರಿ