ಬೆಂಗಳೂರು ಕಾಲ್ತುಳಿತದ ಘಟನೆ : ಕಾಂಗ್ರೆಸ್‌ ಹೈಕಮಾಂಡ್‌ ನಿಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರಗೆ ದೆಹಲಿಗೆ ಬುಲಾವ್‌…

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವಿಗೀಡಾದ ಘಟನೆಯ ಕೆಲವು ದಿನಗಳ ನಂತರ, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ದೆಹಲಿಗೆ ಬುಲಾವ್‌ ನೀಡಿದೆ ಎಂದು ತಿಳಿದುಬಂದಿದೆ.
ಕಾಲ್ತುಳಿತ ಘಟನೆಯಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಹೈಕಮಾಂಡ್  ಮಂಗಳವಾರ ಬೆಳಿಗ್ಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ ಅವರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸೂಚಿಸಲಾಗಿದೆ ಎನ್ನಲಾಗಿದೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಮಿತ್ತ ಈಗಾಗಲೇ ದೆಹಲಿಯಲ್ಲಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲು ಅವರು ತಮ್ಮ ದೆಹಲಿ ಭೇಟಿಯನ್ನು ವಿಸ್ತರಿಸುವ ಸಾಧ್ಯತಯಿದೆ ಎಂದು ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಳಿಗ್ಗೆ ದೆಹಲಿಗೆ ತೆರಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಐಪಿಎಲ್‌ ಗೆಲುವಿನ ಬಗ್ಗೆ ಆರ್‌ಸಿಬಿಯ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಅವರನ್ನು ಅಮಾನತುಗೊಳಿಸುವುದು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಪರಿಷತ್‌ ಸದಸ್ಯ ಕೆ. ಗೋವಿಂದರಾಜು ಅವರನ್ನು ವಜಾಗೊಳಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ” ತಳಮಟ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲದೆ ಅದನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ” ಕಾಂಗ್ರೆಸ್ ಹೈಕಮಾಂಡ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ.
ಕೇಂದ್ರ ನಾಯಕರ ಒತ್ತಾಯದ ನಂತರವೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಘಟನೆ ಕುರಿತು ತನಿಖೆ ನಡೆಸಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ನೇತೃತ್ವದ ಏಕವ್ಯಕ್ತಿ ನ್ಯಾಯಾಂಗ ಆಯೋಗವನ್ನು ನೇಮಿಸಿತು ಮತ್ತು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಿತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಯ ಮೊಮ್ಮಗ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮಗ ವಿಧಾನಸೌಧ ವೇದಿಕೆಯಲ್ಲಿ ಇರುವುದು ಮತ್ತೊಂದು ನಕಾರಾತ್ಮಕ ಅಂಶವಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಮುಖ ಸುದ್ದಿ :-   ಅಮೆರಿಕ ವಿಮಾನ ನಿಲ್ದಾಣದಲ್ಲಿ ಭಾರತೀಯ ವ್ಯಕ್ತಿಯ ಕೈಗೆ ಕೋಳ ಹಾಕಿ ನೆಲಕ್ಕೆ ಕೆಡವಿ ಒತ್ತಿ ಹಿಡಿದ ವೀಡಿಯೊ ವೈರಲ್‌

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement