ನವದೆಹಲಿ: ಈ ಹಿಂದೆ ನಡೆಸಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ)ವರದಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆ ನಡೆಸಲು ನಿರ್ಧರಿಸಿದೆ.
ಜಾತಿ ಗಣತಿ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಸೂಚನೆ ನೀಡಿದ ಬೆನ್ನಲ್ಲೇ ದೆಹಲಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ಮರು ಸಮೀಕ್ಷೆ ನಡೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಸ್ತುತ ಜಾತಿ ಗಣತಿ ವರದಿ 10 ವರ್ಷ ಹಳೆಯದಾಗಿರುವ ಕಾರಣ ನಿರ್ದಿಷ್ಟ ಕಾಲ ಮಿತಿಯಲ್ಲಿ ಮರು ಸಮೀಕ್ಷೆ ನಡೆಸಲು ಸರ್ಕಾರ ನಿರ್ಧಾರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ದೆಹಲಿಯಲ್ಲಿ ಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆಲವು ಮಹತ್ವದ ಸೂಚನೆಗಳನ್ನು ನೀಡಿದೆ. ಜಾತಿ ಗಣತಿಯ ವರದಿಯ ದತ್ತಾಂಶ ಸರಿಯಿಲ್ಲ ಎಂದು ಹಲವರ ಆಕ್ಷೇಪವಿದೆ. ಹೀಗಾಗಿ ಕಾಲಮಿತಿಯಲ್ಲಿ ಮರು ಗಣತಿ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ.
ಬೆಂಗಳೂರು ಕಾಲ್ತುಳಿದ ಘಟನೆಯ ನಂತರ ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಕಾಂಗ್ರೆಸ್ ವರಿಷ್ಠರ ಜೊತೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಇದೇ ವೇಳೆ ಅಲ್ಲದೆ ಜಾತಿ ಗಣತಿ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇಂದಿನ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಮಾಡಲಾಗಿದೆ. ಪ್ರಸ್ತುತ ಜಾತಿ ಗಣತಿ ವರದಿ 10 ವರ್ಷ ಹಳೆಯದಾಗಿರುವ ಕಾರಣ ನಿರ್ದಿಷ್ಟ ಕಾಲ ಮಿತಿಯಲ್ಲಿ ಮರು ಸಮೀಕ್ಷೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಜೂನ್ 12 ರಂದು ಸಚಿವ ಸಂಪುಟ ಸಭೆಯಲ್ಲಿ ಯಾವ ರೀತಿ ಕಾಲಮಿತಿ ವಿಧಿಸಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯದ ಬೆಳವಣಿಗೆಗಳು ಹಾಗೂ ಇತರ ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಚರ್ಚೆ ಮಾಡಿದರು. ಸಭೆಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಕೆಲವರು ಆಕ್ಷೇಪ ಎತ್ತಿರುವ ಬಗ್ಗೆಯೂ ಚರ್ಚೆ ನಡೆಯಿತು. ಜಾತಿಗಣತಿ ಸಮೀಕ್ಷೆ ಮಾಡಿ 9 ರಿಂದ 10 ವರ್ಷ ಆಗಿದೆ. ಹಾಗಾಗಿ ಮತ್ತೊಮ್ಮೆ ಸಮೀಕ್ಷೆ ಮಾಡಲು ಸೂಚಿಸಿದ್ದಾರೆ. ಮತ್ತೊಮ್ಮೆ ಜಾತಿ ಗಣತಿ ಸಮೀಕ್ಷೆಗೆ ನಾವು ಒಪ್ಪಿಗೆ ನೀಡಿದ್ದೇವೆ. 90 ದಿನದೊಳಗೆ ಜಾತಿಗಣತಿ ಸಮೀಕ್ಷೆ ಮುಗಿಯಲಿದೆ ಎಂದು ತಿಳಿಸಿದರು.
ಕಾಲ್ತುಳಿತ ದುರಂತ ಪ್ರಕರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದ್ದು, ಕೈಗೊಂಡಿರುವ ಕ್ರಮದ ಬಗ್ಗೆ ವಿವರಿಸಿದ್ದೇವೆ. ಘಟನೆ ಕುರಿತು ಸಿಐಡಿ ತನಿಖೆ , ನ್ಯಾಯಮೂರ್ತಿ ಕುನ್ಹಾ ನೇತೃತ್ವದ ತನಿಖೆ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಇಂಟಲಿಜೆನ್ಸ್ ಮುಖ್ಯಸ್ಥರ ವರ್ಗಾವಣೆ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ