ಮದುವೆ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ಬಂದ ವರನ ಕುಟುಂಬಕ್ಕೆ ಆಘಾತ; ಅಲ್ಲಿ ವಧು-ಮನೆಯವರೇ ಇರಲಿಲ್ಲ..! ಆಗಿದ್ದೇನು..?

ಮೋಗಾ: ಧ್ವನಿವರ್ಧಕಗಳಿಂದ ಹಾಡುಗಳು ಕೇಳಿಬರುತ್ತಿತ್ತು. ʼಮದುವೆ ಮೆರವಣಿಗೆ’ ಸಂಭ್ರಮದಿಂದ ಕೂಡಿತ್ತು, ಮದುಮಗ ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಿದ್ಧನಾಗಿದ್ದ. ಆದರೆ ವರನ ಕಡೆಯ ಮದುವೆ ಮೆರವಣಿಗೆಯು ತಮ್ಮ ಗಮ್ಯಸ್ಥಾನವನ್ನು ಸಮೀಪಿಸುತ್ತಿದ್ದಂತೆ ಈ ಸಂತೋಷವು ಮಾಯವಾಯಿತು. ಮದುವೆ ನಡೆಯಬೇಕಾದ ಸ್ಥಳದಲ್ಲಿ ಅಲಂಕಾರಿಕ ದೀಪಗಳಿಲ್ಲ, ಸಂಗೀತವಿಲ್ಲ, ಮತ್ತು ಅತಿಥಿಗಳು ಇರಲಿಲ್ಲ. ಅವರು ಹೋಗಬೇಕಾದ ಮನೆಯ ಹೊರಗೆ ಬೀಗ ಹಾಕಲಾಗಿತ್ತು, ವಧುವಿನ ಕಡೆಯವರ ವಿಳಾಸವೂ ನಕಲಿಯಾಗಿತ್ತು, ಗಂಡಿನ ಕಡೆಯವರಿಗೆ ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ತಿಳಿಯದೇ ಹೋಯಿತು.
ಪಂಜಾಬಿನ ಮೋಗಾ ಜಿಲ್ಲೆಯಲ್ಲಿ ಮದುವೆಯೊಂದರಲ್ಲಿ ನಡೆದ ಆಘಾತಕಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ಅಮೃತಸರದ ಸುಲ್ತಾನ್‌ ವಿಂಡ್‌ ಗ್ರಾಮದಿಂದ 40 ರಿಂದ 45 ಅತಿಥಿಗಳೊಂದಿಗೆ ಮೋಗಾಕ್ಕೆ ಭವ್ಯವಾದ ವಿವಾಹ ಮೆರವಣಿಗೆ ತಲುಪಿದ ನಂತರವೇ ಮದುವೆ ನಕಲಿ ಎಂದು ಎಂಬುದು ವರನ ಕಡೆಯವರಿಗೆ ಗೊತ್ತಾಗಿದ್ದು. ವರನ ಕುಟುಂಬವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಮದುವೆ ನಡೆಯುವ ಸ್ಥಳಕ್ಕೆ ಉತ್ಸಾಹದಿಂದ ಪ್ರಯಾಣಿಸಿತ್ತು. ಆದಾಗ್ಯೂ, ಅವರು ವಧುವಿನ ಕಡೆಯವರು ವಿಳಾಸ ನೀಡಿದ್ದ ಸ್ಥಳವನ್ನು ತಲುಪಿದಾಗ, ಅಲ್ಲಿ ಯಾವುದೇ ವಿವಾಹದ ವ್ಯವಸ್ಥೆಗಳ ಲಕ್ಷಣಗಳು ಕಂಡುಬಂದಿರಲಿಲ್ಲ. ವಧು ಹಾಗೂ ಆಕೆಯ ಕುಟುಂಬವೂ ಅಲ್ಲಿರಲಿಲ್ಲ..!

ಪ್ರಮುಖ ಸುದ್ದಿ :-   ಅಹಮದಾಬಾದ್ ವಿಮಾನ ಪತನ | ವಿಮಾನದಲ್ಲಿದ್ದವರು ಯಾವ್ಯಾವ ದೇಶಕ್ಕೆ ಸೇರಿದವರು ಎಂಬ ಮಾಹಿತಿ ನೀಡಿದ ಏರ್‌ ಇಂಡಿಯಾ

ವರನ ಕುಟುಂಬಕ್ಕೆ ಈ ಪ್ರದೇಶವು ಹೊಸದಾಗಿತ್ತು. ಅವರಿಗೆ ಈ ಪ್ರದೇಶದ ಬಗ್ಗೆ ಗೊತ್ತಿರಲಿಲ್ಲ. ಅವರು ಹುಡುಗಿಯ ಛಾಯಾಚಿತ್ರವನ್ನು ಅಲ್ಲಿದ್ದ ಜನರಿಗೆ ತೋರಿಸಿದಾಗ, ಯಾರೂ ಅವಳನ್ನು ಗುರುತಿಸಲಿಲ್ಲ. ಆ ಹೆಸರಿನ ಯಾರೂ ಆ ಪ್ರದೇಶದಲ್ಲಿ ವಾಸಿಸುತ್ತಿಲ್ಲ ಎಂದು ಸ್ಥಳೀಯರು ದೃಢಪಡಿಸಿದರು.
ವರನ ಅತ್ತಿಗೆಯ ಪ್ರಕಾರ, ಮದುವೆಯು ಸಂಬಂಧಿಕರಿಂದ ನಿಶ್ಚಯವಾಗಿತ್ತು ಮತ್ತು ದಂಪತಿ ವೀಡಿಯೊ ಕರೆಗಳಲ್ಲಿ ಹಲವಾರು ಬಾರಿ ಮಾತನಾಡಿದ್ದರು. ಹುಡುಗಿ ಯುನೈಟೆಡ್‌ ಕಿಂಗ್ಡಂ ಮೂಲದವಳು ಎಂದು ಹೇಳಿಕೊಂಡಿದ್ದಳು ಮತ್ತು ಎಲ್ಲಾ ವಿವಾಹ ವ್ಯವಸ್ಥೆಗಳನ್ನು ತಾನು ಮಾಡುವುದಾಗಿ ವರನ ಕುಟುಂಬಕ್ಕೆ ತಿಳಿಸಿದ್ದಳು. ಅವಳು ವರನ ಕಡೆಯವರಿಗೆ ವಿವಾಹ ಸ್ಥಳದ ವಿವರಗಳನ್ನು ಸಹ ನೀಡಿದ್ದಳು ಮತ್ತು ಎಲ್ಲ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಳು. ಆದರೆ ವರನ ಕುಟುಂಬವು ಮೋಗಾ ತಲುಪಿದಾಗ ಎಲ್ಲವೂ ಸುಳ್ಳು ಎಂಬುದು ತಿಳಿದು ಆಘಾತಕ್ಕೊಳಗಾಯಿತು.

ಹುಡುಗಿಯ ಮನೆ ಮತ್ತು ಕಾರ್ಡ್‌ನಲ್ಲಿ ಮುದ್ರಿತ ಮದುವೆಯ ಸ್ಥಳವನ್ನು ದಿನವಿಡೀ ಹುಡುಕಿದೆ, ಆದರೆ ಅವರಿಗೆ ಅದು ಸಿಗಲಿಲ್ಲ ಎಂದು ವರನ ತಂದೆ ಹೇಳಿದ್ದಾರೆ. ಹುಡುಗಿ ಮದುವೆಯ ಸ್ಥಳವೆಂದು ಉಲ್ಲೇಖಿಸಿದ ರಾಯಲ್ ಪ್ಯಾಲೇಸ್‌ಗೆ ಭೇಟಿ ನೀಡಿದಾಗ, ಆ ದಿನದಂದು ಯಾವುದೇ ಕಾರ್ಯಕ್ರಮಕ್ಕೆ ಬುಕಿಂಗ್ ಮಾಡಲಾಗಿಲ್ಲ ಎಂದು ಮಾಲೀಕರು ಸ್ಪಷ್ಟವಾಗಿ ಹೇಳಿದ್ದಾರೆ. ಆಗ ಕುಟುಂಬವು ತಮ್ಮನ್ನು ಮೋಸಗೊಳಿಸಲಾಗಿದೆ ಎಂದು ಅರಿತುಕೊಂಡರು.
ವರನ ಕುಟುಂಬವು ದೂರು ದಾಖಲಿಸಿದೆ ಮತ್ತು ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದೆ. ಇಲ್ಲಿಯವರೆಗೆ, ಯಾರನ್ನೂ ಬಂಧಿಸಲಾಗಿಲ್ಲ, ಆದರೆ ಪೊಲೀಸರು ಹುಡುಗಿಯನ್ನು ಪತ್ತೆಹಚ್ಚಲು ಮತ್ತು ವಂಚನೆಯನ್ನು ಹೇಗೆ ಯೋಜಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಮೋಗಾದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಇದೇ ರೀತಿಯ ಪ್ರಕರಣವೊಂದರಲ್ಲಿ, ಮದುವೆ ಮೆರವಣಿಗೆ ವಧುವಿನ ಮನೆಗೆ ತಲುಪಿದಾಗ ಇಡೀ ಕುಟುಂಬ ನಾಪತ್ತೆಯಾಗಿರುವುದು ಎಂದು ಕಂಡುಬಂದಿತ್ತು. ಆಗ ದಿಬ್ಬಣ ಸಮೇತ ಬಂದಿದ್ದ ವರನ ಕುಟುಂಬ ಖಾಲಿ ಕೈಯಲ್ಲಿ ಮನೆಗೆ ಹಿಂತಿರುಗಬೇಕಾಯಿತು.

ಪ್ರಮುಖ ಸುದ್ದಿ :-   ಪವಾಡ | ಏರ್ ಇಂಡಿಯಾ ವಿಮಾನ ಪತನ ; ಅವಶೇಷದ ಅಡಿಯಿಂದ ಜೀವಂತ ಹೊರಬಂದ ವ್ಯಕ್ತಿ...! ನಡೆದುಹೋದ ವೀಡಿಯೊ ವೈರಲ್‌

4.8 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement